ADVERTISEMENT

ತರಕಾರಿ ಮಾರುವ ನಾರಿಯರ ನೆರವಿಗೆ ‘ಮೈತ್ರಿ’

ಶೌಚಾಲಯ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಚಲನಚಿತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 15:03 IST
Last Updated 7 ಮಾರ್ಚ್ 2021, 15:03 IST

ಬೆಳಗಾವಿ: ನಗರದ ವಿವಿಧೆಡೆಯಿಂದ ಹಾಗೂ ಹಳ್ಳಿಗಳಿಂದ ತರಕಾರಿ ಮಾರಲು ನಗರಕ್ಕೆ ಬರುವ ಮಹಿಳೆಯರ ಘನತೆ ಕಾಪಾಡಲು ನೆರವಾಗುವ ಉದ್ದೇಶದಿಂದ ಸರ್ಕಾರಿ ಅಧಿಕಾರಿಗಳ ‘ಮೈತ್ರಿ’ ಮಹಿಳಾ ಕ್ಲಬ್ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳಾ ಚಲನಚಿತ್ರೋತ್ಸವ ಆಯೋಜಿಸಲಾಗಿದೆ.

ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿರುವ ಈ ಕ್ಲಬ್, ರವಿವಾರಪೇಟೆ ಹಾಗೂ ಕಂಬಳಿ ಕೂಟ್ ಪ್ರದೇಶದಲ್ಲಿ ತರಕಾರಿ ಮಾರುವ ಮಹಿಳೆಯರಿಗಾಗಿಯೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿದೆ. ಅಲ್ಲಿಗೆ ವಿವಿಧೆಡೆಯಿಂದ ಬರುವ ನೂರಾರು ಮಹಿಳೆಯರು ಪ್ರತಿ ದಿನ ಬೆಳಿಗ್ಗೆಯಿಂದ ಸಂಜೆವರೆಗೆ ತರಕಾರಿ ಮಾರಿ ಜೀವನ ಸಾಗಿಸುತ್ತಾರೆ. ಶೌಚಾಲಯದ ವ್ಯವಸ್ಥೆ ಇಲ್ಲದೆ ಅವರು ತೊಂದರೆ ಅನುಭವಿಸುತ್ತಾರೆ. ಶೌಚಾಲಯ ವ್ಯವಸ್ಥೆ ಇಲ್ಲದ ಶೋಚನೀಯ ಸ್ಥಿತಿಯಿಂದಾಗಿ ಮುಜುಗರಕ್ಕೆ ಒಳಗಾಗುತ್ತಿದ್ದಾರೆ. ಈ ಸ್ಥಿತಿಯನ್ನು ಗಮನಿಸಿದ ‘ಮೈತ್ರಿ’ಯು ಶೌಚಾಲಯ ನಿರ್ಮಿಸಿಕೊಡುವ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಹಣ ಸಂಗ್ರಹಿಸಲು ಮಾರ್ಚ್‌ 14ರಿಂದ 16ರವರೆಗೆ ಮಹಿಳಾ ಚಲನಚಿತ್ರೋತ್ಸವ ಹಮ್ಮಿಕೊಂಡಿದೆ.

ಮಹಿಳಾ ಸಾಧನೆ ಸಾರುವ ಹಾಗೂ ಮಹಿಳೆಯರೆ ಪ್ರಮುಖ ಭೂಮಿಕೆಯಲ್ಲಿರುವ ಕನ್ನಡ ಮತ್ತು ಹಿಂದಿ ಭಾಷೆಯ ಆಯ್ದ 7 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇಲ್ಲಿನ ಶಿವಬಸವ ನಗರದಲ್ಲಿರುವ ಎಸ್.ಜಿ. ಬಾಳೇಕುಂದ್ರಿ ಎಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್–1ರಲ್ಲಿ ಆಯೋಜಿಸಲಾಗಿದೆ.

ADVERTISEMENT

14ರಂದು ಬೆಳಿಗ್ಗೆ 10.45ಕ್ಕೆ ‘ಗುಲಾಬಿ ಟಾಕೀಸ್’, ಮಧ್ಯಾಹ್ನ 1.40ಕ್ಕೆ ‘ಮರ್ದಾನಿ-2’ ಹಾಗೂ ಸಂಜೆ 4.20ಕ್ಕೆ ‘ಟಾಯ್ಲೆಟ್’, ‌15ರಂದು ಬೆಳಿಗ್ಗೆ 9.20ಕ್ಕೆ ‘ಅಸ್ತಿತ್ವ’, ಮಧ್ಯಾಹ್ನ 12.30ಕ್ಕೆ ‘ಚಾಕ್ ಆಂಡ್‌ ಡಸ್ಟರ್’ ಹಾಗೂ ಮಧ್ಯಾಹ್ನ 3.30ಕ್ಕೆ ‘ರಾಜೀ’ ಚಿತ್ರ ಪ್ರದರ್ಶನ ನಡೆಯಲಿದೆ. ಕೊನೆಯ ದಿನವಾದ ಮಾರ್ಚ್ 16ರಂದು ವಿಶೇಷ ಪ್ರದರ್ಶನದಲ್ಲಿ ಬೆಳಿಗ್ಗೆ 10.30ಕ್ಕೆ ‘ಶಕುಂತಲಾ ದೇವಿ’ ಚಲನಚಿತ್ರ ಪ್ರದರ್ಶಿಸಲಾಗುವುದು.

16ರಂದು ನಡೆಯಲಿರುವ ವಿಶೇಷ ಪ್ರದರ್ಶನಕ್ಕೆ ನಾಗನೂರು‌ ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಮುಖ್ಯ ಅತಿಥಿಗಳಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಅತಿಥಿಗಳಾಗಿ ಪಾಲ್ಗೊಳ್ಳುವರು. ‘ಫೆಮಿನಾ‌ ಮಿಸ್ ಇಂಡಿಯಾ ಕರ್ನಾಟಕ-2020’ ಖ್ಯಾತಿಯ ರಾಟಿ ಹುಲಜಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಚಿತ್ರಗಳ ಪ್ರತಿ‌ ಪ್ರದರ್ಶನಕ್ಕೆ ₹ 200 ಶುಲ್ಕ ನಿಗದಿಪಡಿಸಲಾಗಿದೆ. ಸಂಗ್ರಹವಾಗುವ ಹಣವನ್ನು ಮಹಿಳೆಯರ ಶೌಚಾಲಯ ನಿರ್ಮಾಣಕ್ಕೆ ಬಳಸಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗೆ ಕ್ಲಬ್‌ನ ಸಾಂಸ್ಕೃತಿಕ ನಿರ್ದೇಶಕಿ ಆರತಿ ಅಂಗಡಿ (ಮೊ:94488 54743) ಸಂಪರ್ಕಿಸಬಹುದು’ ಎಂದು ಕ್ಲಬ್‌ ಪ್ರಕಟಣೆಯಲ್ಲಿ ತಿಳಿಸಿದೆ.

***

ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಇಂದು

ಬೆಳಗಾವಿ: ಸತೀಶ ರಾಜೆ ಪ್ರತಿಷ್ಠಾನದಿಂದ ಮಾರ್ಚ್‌ 8ರಂದು ಬೆಳಿಗ್ಗೆ 10ಕ್ಕೆ ಹಳೆ ‍ಪಿ.ಬಿ. ರಸ್ತೆಯ ರೂಪಾಲಿ ಕನ್ವೆಷನ್ ಹಾಲ್‌ನಲ್ಲಿ ಮಹಿಳಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದ ಸಾಧಕಿಯರಿಗೆ ‘ಸಾವಿತ್ರಿಬಾಯಿ ಫುಲೆ’ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರತಿಷ್ಠಾನದ ಅಧ್ಯಕ್ಷ ಸತೀಶ ಸನದಿ ಅಧ್ಯಕ್ಷತೆ ವಹಿಸುವರು. ಚಲನಚಿತ್ರ ನಟಿ ಊರ್ಮಿಳಾ ಮತೋಡ್ಕರ್‌ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ನಿಯತಿ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್, ಶಾಸಕ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ರಾಷ್ಟ್ರೀಯ ಮಹಿಳಾ ಸಂಘಟನೆ ಕಾರ್ಯಕಾರಿಣಿ ಸದಸ್ಯೆ ರೂಪಾ ಪ್ರಮೋದ ದೇಸಾಯಿ, ಉದ್ಯಮಿ ಜ್ಯೋತ್ಸ್ನಾ, ವಕೀಲೆ ಸೋನಾಲಿ ಮಗದುಮ್ಮ ಪಾಲ್ಗೊಳ್ಳುವರು.

ರಾಮದುರ್ಗದ ತುಳಜಾ ಭವಾನಿ ಮಾತಾಜಿ, ರತ್ನಪ್ರಭಾ ಬೆಲ್ಲದ, ಜಯಶ್ರೀ ಗುರನ್ನವರ, ಲಕ್ಷ್ಮಿ ಆರಿಬೆಂಚಿ, ಸುನೀತಾ ದೇಸಾಯಿ, ಸುಮಿತ್ರಾ ದಳವಾಯಿ, ಅಖಿಲಾ ಪಠಾಣ, ಪ್ರಭಾವತಿ ಪಾಟೀಲ, ಕನ್ಯಾಕುಮಾರಿ ಕುಸ್ತಿಗಾರ, ಪ್ರತಿಭಾ ಕಳ್ಳಿಮಠ ಹಾಗೂ ಅನಿಲಾ ಶಹಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.