ಹುಕ್ಕೇರಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಮಹಿಳೆಯರು ಜೋಕಾಲಿ ಆಡುವ ಮೂಲಕ ನಾಗ ಪಂಚಮಿಯನ್ನು ಸೋಮವಾರ ಮತ್ತು ಮಂಗಳವಾರ ಭಕ್ತಿಭಾವದಿಂದ ಆಚರಿಸಿದರು.
ಸೋಮವಾರ ಮಣ್ಣಿನಿಂದ ಮಾಡಿದ ನಾಗರ ಮೂರ್ತಿಗೆ ಮನೆಯಲ್ಲಿ ಮಹಿಳೆಯರು ಸೇರಿದಂತೆ ಪುರುಷರು ಎಲ್ಲರ ಪಾಲಿನ ಹಾಲು ಎರೆದು ವಿವಿಧ ರೀತಿ ತಯಾರಿಸಿದ ಉಂಡೆ (ಲಡ್ಡು) ಮತ್ತು ಎಳ್ಳು, ತಂಬಿಟ್ಟು ಮತ್ತು ಅಳ್ಳಿಟ್ಟು ಎಡೆ ಹಿಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದ ಹುತ್ತುಗಳಿಗೆ (ಮಣ್ಣಿನ ಗುಡ್ಡೆ) ಮಹಿಳೆಯರು ಹಾಲು ಎರೆದು ನೈವೇದ್ಯ ಹಿಡಿದು ನಮಿಸಿದರು. ಮಂಗಳವಾರ ನಾಗಪ್ಪನಿಗೆ ಹಾಲು ಎರೆದು ಹುತ್ತ ಮುರಿಯುವ ಪದ್ಧತಿ ( ಎಣ್ಣೆಯಿಂದ ಯಾವ ವಸ್ತು ಕರಿಯುವುದಿಲ್ಲ) ಆಚರಿಸಿದರು. ಮಕ್ಕಳು ಮನೆಯ ಮುಂದೆ ಕಟ್ಟಿದ ಜೋಕಾಲಿ ಜೀಕಿದರೆ, ದೊಡ್ಡವರು ಸಾರ್ವಜನಿಕವಾಗಿ ನಿರ್ಮಿಸಿದ ಜೋಕಾಲಿ ಜೀಕಿ ಆನಂದಿಸಿದರು.
ಪಟ್ಟಣದ ಹಳ್ಳದಕೇರಿಯ ಜೇಂಡಾ ಕಟ್ಟೆ ಬಳಿ ನಿರ್ಮಿಸಿದ ಸಾರ್ವಜನಿಕ ಜೋಕಾಲಿ ಆಡುವುದು ವಿಶೇಷವಾಗಿತ್ತು.
ಮನೆಯಲ್ಲಿ ಮಾಡಿದ್ದ ಸಿಹಿ ಪದಾರ್ಥಗಳಾದ ಹೋಳಿಗೆ, ಕುದಿಸಿದ ಹೂರಣ ಕಡಬು ಸೇರಿ ವಿವಿಧ ರುಚಿಯಾದ ಖಾದ್ಯವನ್ನು ಮನೆಯವರೆಲ್ಲ ಉಂಡು ಸಂತಸ ಪಟ್ಟರು.
ಗಂಡನ ಮನೆಯಿಂದ ತವರು ಮನೆಗೆ ಬಂದು ಪಂಚಮಿ ಆಚರಿಸಿದ ಹೆಣ್ಣುಮಕ್ಕಳಿಗೆ ತವರು ಮನೆಯವರು ಸೀರೆ,ಕುಪ್ಪುಸ ಮತ್ತು ಮಕ್ಕಳಿಗೆ ಸಿದ್ಧ ಉಡುಪು ಉಡುಗೋರೆಯಾಗಿ ನೀಡಿ ಸಂತಸ ಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.