ADVERTISEMENT

ರಾಷ್ಟ್ರೀಯ ಕಾನೂನು ಉತ್ಸವ 22ರಿಂದ

ದೇಶದ ವಿವಿಧ 24 ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 13:49 IST
Last Updated 19 ಮಾರ್ಚ್ 2019, 13:49 IST

ಬೆಳಗಾವಿ: ‘ಇಲ್ಲಿನ ಬಿ.ವಿ. ಬೆಲ್ಲದ ಕಾನೂನು ಕಾಲೇಜು ಹಾಗೂ ಕೆಎಲ್‌ಇ ಲಾ ಅಕಾಡೆಮಿ ವತಿಯಿಂದ ಮಾರ್ಚ್‌ 22ರಿಂದ 24ರವರೆಗೆ ಲಿಂಗರಾಜ ಕಾಲೇಜಿನಲ್ಲಿ ರಾಷ್ಟ್ರೀಯ ಕಾನೂನು ಉತ್ಸವ ಆಯೋಜಿಸಲಾಗಿದೆ’ ಎಂದು ಪ್ರಾಚಾರ್ಯ ಬಿ. ಜಯಸಿಂಹ ತಿಳಿಸಿದರು.

‘22ರಂದು ಸಂಜೆ 4ಕ್ಕೆ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ. ಈಶ್ವರ್‌ ಭಟ್‌ ಉದ್ಘಾಟಿಸುವರು. ರಾಜ್ಯ ವಕೀಲರ ಪರಿಷತ್ತು ಅಧ್ಯಕ್ಷ ಕೆ.ಬಿ. ನಾಯ್ಕ ಹಾಗೂ ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಕಾಲೇಜಿನ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಬಿ. ಬೆಲ್ಲದ ಅಧ್ಯಕ್ಷತೆ ವಹಿಸುವರು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ಕಕ್ಷಿದಾರರ ಸಂದರ್ಶನ ಹಾಗೂ ಸಮಾಲೋಚನೆ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಕಾನೂನು ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಗಳಿರಲಿವೆ. ವಿದ್ಯಾರ್ಥಿಗಳಿಗೆ, ವಕೀಲರಾಗಲು ಬೇಕಾದ ಕಾನೂನು ಜ್ಞಾನ ಮತ್ತು ಸಂಶೋಧನಾ ನೈಪುಣ್ಯತೆ ಹೆಚ್ಚಿಸುವುದು ಉತ್ಸವ ಉದ್ದೇಶವಾಗಿದೆ. ರಾಜ್ಯ ಹಾಗೂ ದೇಶದ ವಿವಿಧ 24 ಕಾನೂನು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸುವರು. ಈ ಭಾಗದ ಕಾರ್ಯನಿರತ ವಕೀಲರನ್ನು ನಿರ್ಣಾಯಕರನ್ನಾಗಿ ಆಹ್ವಾನಿಸಲಾಗಿದೆ’ ಎಂದು ಹೇಳಿದರು.‌

ADVERTISEMENT

‘ಮಾರ್ಚ್‌ 24ರ ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಹೈಕೋರ್ಟ್‌ ನ್ಯಾಯಾಧೀಶ ಬಿ.ಎಂ. ಶ್ಯಾಮ್‌ಪ್ರಸಾದ್‌, ವಕೀಲರಾದ ಎಂ.ಬಿ. ಝಿರಲಿ ಹಾಗೂ ಬಸವಪ್ರಭು ಹೊಸಕೇರಿ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಪ್ರಥಮ ಹಾಗೂ ರನ್ನರ್‌ ಅಪ್‌ ಸ್ಥಾನ ಪಡೆದರಿಗೆ ನಗದು ಬಹುಮಾನ ಮತ್ತು ಟ್ರೋಫಿಗಳನ್ನು ನೀಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.