ಉಗರಗೋಳ: ಸಮೀಪದ ಯಲ್ಲಮ್ಮನ ಗುಡ್ಡದಲ್ಲಿ ನವರಾತ್ರಿ ಉತ್ಸವ ಸಂಭ್ರಮದಿಂದ ಆಚರಿಸಲು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರವು ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಸಜ್ಜಾಗಿದೆ. ಗುಡ್ಡದಲ್ಲಿನ ಅಂಗಡಿಗಳನ್ನು ಸುಣ್ಣ–ಬಣ್ಣಗಳಿಂದ ಸಿಂಗರಿಸಲಾಗುತ್ತಿದೆ.
ನಾಡಿನ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಗಣ್ಯರು ಸೆ.22ರಂದು ಸಂಜೆ ಮೊದಲ ಘಟ್ಟ ಸ್ಥಾಪಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅ.1ರಂದು ಆಯುಧ ಪೂಜೆ ಇದ್ದು, 2ರಂದು ಬನ್ನಿ ಮುಡಿಯುವ ಮೂಲಕ ಉತ್ಸವ ಸಂಪನ್ನಗೊಳ್ಳಲಿದೆ.
ನವರಾತ್ರಿಯಲ್ಲಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ನೆರವೇರಲಿದೆ. ಪ್ರತಿದಿನ ಒಂದೊಂದು ಅವತಾರದಲ್ಲಿ ಸಾವಿರಾರು ಸೀರೆ ಬಳಸಿ, ದೇವಿಗೆ ಅಲಂಕಾರ ಮಾಡಲಾಗುತ್ತದೆ. ಒಂಭತ್ತು ದಿನಗಳಲ್ಲಿ ಲಕ್ಷಾಂತರ ಭಕ್ತರು ಗುಡ್ಡಕ್ಕೆ ಆಗಮಿಸಿ, ದೇವಿ ದರ್ಶನ ಪಡೆಯುವರು.
‘ನವರಾತ್ರಿಯಲ್ಲಿ ಗುಡ್ಡಕ್ಕೆ ಬರುವ ಪ್ರತಿ ಭಕ್ತರು ದೀಪಕ್ಕೆ ಎಣ್ಣೆ ಹಾಕುವುದು ವಾಡಿಕೆ. ಹಾಗಾಗಿ ಯಲ್ಲಮ್ಮ ದೇವಿ ಗರ್ಭಗುಡಿ ಎದುರು ಬೃಹತ್ ದೀಪ ಅಳವಡಿಸಲಾಗಿದೆ. ಭಕ್ತರು ಅದರಲ್ಲೇ ಎಣ್ಣೆ ಹಾಕಿ ಭಕ್ತಿ ಸಮರ್ಪಿಸಬೇಕು. ದಟ್ಟಣೆ ಕಾರಣಕ್ಕೆ ದೇವಸ್ಥಾನದೊಳಗೆ ಹೋಗಲು ಸಾಧ್ಯವಾಗದವರು ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿನ ದೀಪಗಳಿಗೆ ಎಣ್ಣೆ ಹಾಕಬೇಕು’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಹೇಳಿದ್ದಾರೆ.
‘ಗುಡ್ಡದಲ್ಲಿ ನವರಾತ್ರಿ ಉತ್ಸವಕ್ಕೆ ಮಹಾರಾಷ್ಟ್ರದ ಭಕ್ತರು ಹೆಚ್ಚಾಗಿ ಬರುತ್ತಾರೆ. ಅವರಿಗೆ ಬೆಳಗಾವಿ ಕೇಂದ್ರೀಯ ಬಸ್ ನಿಲ್ದಾಣದಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಿದ್ದೇವೆ’ ಎಂದು ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್.ಗುಡೆನ್ನವರ ತಿಳಿಸಿದ್ದಾರೆ.
‘ಜಾತ್ರೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮ ವಹಿಸಿದ್ದೇವೆ. ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿದ್ದೇವೆ’ ಎಂದು ಎಸ್‍ಪಿ ಡಾ.ಭೀಮಾಶಂಕರ ಗುಳೇದ ಹೇಳಿದ್ದಾರೆ.
2023ರ ನವರಾತ್ರಿಯಲ್ಲಿ 14,194 ಕೆ.ಜಿ, 2024ರಲ್ಲಿ 16,200 ಕೆ.ಜಿ ಎಣ್ಣೆ ಸಂಗ್ರಹವಾಗಿತ್ತು. ಕಳೆದ ವರ್ಷ ನವರಾತ್ರಿಯಲ್ಲಿ 21 ಲಕ್ಷಕ್ಕೂ ಅಧಿಕ ಭಕ್ತರು ದೇವಿ ದರ್ಶನ ಪಡೆದಿದ್ದರು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ನವರಾತ್ರಿ ಉತ್ಸವ ಯಶಸ್ವಿಯಾಗಿ ನಡೆಸಲು ತಯಾರಿ ಮಾಡಿಕೊಂಡಿದ್ದೇವೆ. ಭಕ್ತರಿಗೆ ಮೂಲಸೌಕರ್ಯ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆವಿಶ್ವಾಸ ವೈದ್ಯ ಶಾಸಕ
ನವರಾತ್ರಿ ಉತ್ಸವದಲ್ಲಿ ಸಂಚಾರದಟ್ಟಣೆ ತಲೆದೋರದಂತೆ ನಿಗಾ ವಹಿಸುತ್ತೇವೆ. ಜಾತ್ರೆ ಸುಗಮವಾಗಿ ನಡೆಯಲು ಭಕ್ತರ ಸಹಕಾರವೂ ಅಗತ್ಯಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.