ಬೆಳಗಾವಿ: ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರ ಜೀವನಾಡಿಯಾದ ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಜಲಾಶಯ 11ನೇ ಬಾರಿ ಭರ್ತಿಯಾಗಿದೆ. ಆದರೆ, ರಾಜ್ಯ ಸರ್ಕಾರದಿಂದ ಈವರೆಗೂ ಅದಕ್ಕೆ ಬಾಗಿನ ಅರ್ಪಿಸಿಲ್ಲ.
ಮುಂಗಾರು ಹಂಗಾಮಿನಲ್ಲಿ ಸುರಿದ ಉತ್ತಮ ಮಳೆ ಈ ವರ್ಷ ನಾಡಿನ ವಿವಿಧೆಡೆ ಭರ್ತಿಯಾದ ಅಣೆಕಟ್ಟೆಗಳಿಗೆ ಸರ್ಕಾರದಿಂದ ಬಾಗಿನ ಅರ್ಪಣೆಯಾಗಿದೆ. ಕಾವೇರಿ ನದಿಗೆ ಭಕ್ತಿಪೂರ್ವಕ ನಮನ ಸಲ್ಲಿಸಲು, ಐದು ದಿನ ಅದ್ದೂರಿಯಾಗಿ ‘ಕಾವೇರಿ ಆರತಿ’ ಕಾರ್ಯಕ್ರಮ ನಡೆಸಲಾಗಿದೆ.
ಆದರೆ, ನವಿಲುತೀರ್ಥ ಜಲಾಶಯ ಭರ್ತಿಯಾಗಿ ತಿಂಗಳಾದರೂ, ಬಾಗಿನ ಅರ್ಪಣೆ ವಿಷಯ ಕಡೆಗಣಿಸಲಾಗಿದೆ.
ಗರಿಷ್ಠ 2,079.50 ಅಡಿ ನೀರು ಸಂಗ್ರಹ ಸಾಮರ್ಥ್ಯದ ನವಿಲುತೀರ್ಥ ಜಲಾಶಯ ಕಳೆದ ವರ್ಷವೂ ಮೈದುಂಬಿಕೊಂಡು ನಳನಳಿಸಿತ್ತು. ಆಗಲೂ ಬಾಗಿನ ಅರ್ಪಣೆ ವಿಳಂಬವಾಗಿತ್ತು. ಇದಕ್ಕೆ ರೈತರು ಮತ್ತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ನಂತರ, ಮಲಪ್ರಭಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷೆಯೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ 2024ರ ಅ.15ರಂದು ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಿಸಿದ್ದರು.
ಶಾಸಕರಾದ ಎನ್.ಎಚ್. ಕೋನರೆಡ್ಡಿ, ವಿಶ್ವಾಸ ವೈದ್ಯ, ಬಿ.ಬಿ. ಚಿಮ್ಮನಕಟ್ಟಿ ಪಾಲ್ಗೊಂಡಿದ್ದರು. ಈ ವರ್ಷವೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.
- ನವಿಲುತೀರ್ಥ ಜಲಾಶಯಕ್ಕೆ ಬಾಗಿನ ಅರ್ಪಣೆಗೆ ಸಚಿವರ ದಿನಾಂಕ ಕೇಳಿದ್ದೇವೆ. ಶೀಘ್ರವೇ ಇದನ್ನು ನೆರವೇರಿಸಿ ನಾಡಿನ ಒಳಿತಿಗೆ ಪ್ರಾರ್ಥಿಸುತ್ತೇವೆ ವಿವೇಕ ಮುದಿಗೌಡರಎಇಇ ನವಿಲುತೀರ್ಥ ಜಲಾಶಯ
‘ಹಿಡಕಲ್ ಜಲಾಶಯಕ್ಕೂ ಅರ್ಪಿಸಿಲ್ಲ’
ಭರ್ತಿಯಾದ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯಕ್ಕೂ ಬಾಗಿನ ಅರ್ಪಿಸಿಲ್ಲ. ‘ಹಲವು ವರ್ಷಗಳಿಂದ ಈ ಅಣೆಕಟ್ಟೆಗೆ ಬಾಗಿನ ಅರ್ಪಿಸುವುದಿಲ್ಲ. ಜುಲೈನಲ್ಲಿ ಜಲಾಶಯದಿಂದ ನೀರು ಬಿಡುವಾಗ ಸಾಂಕೇತಿಕವಾಗಿ ಪೂಜೆ ನೆರವೇರಿಸಿದ್ದೇವೆ’ ಎನ್ನುತ್ತಾರೆ ಹಿಡಕಲ್ ಜಲಾಶಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಕೆ.ಜಗದೀಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.