ADVERTISEMENT

ಬಾವಿಗಳ ತುಂಬಾ ತ್ಯಾಜ್ಯ ಸಂಗ್ರಹ; ಜಲ ಮೂಲ ಸಂರಕ್ಷಣೆಗೆ ನಿರ್ಲಕ್ಷ್ಯ

ಸುಧಾಕರ ಎಸ್.ತಳವಾರ, ಬೆಂಗಳೂರು
Published 29 ಏಪ್ರಿಲ್ 2019, 19:30 IST
Last Updated 29 ಏಪ್ರಿಲ್ 2019, 19:30 IST
ಚಿಕ್ಕೋಡಿಯ ಇಂದಿರಾನಗರದಲ್ಲಿರುವ ತೆರೆದ ಬಾವಿ ನಿರುಪಯುಕ್ತವಾಗಿದೆ
ಚಿಕ್ಕೋಡಿಯ ಇಂದಿರಾನಗರದಲ್ಲಿರುವ ತೆರೆದ ಬಾವಿ ನಿರುಪಯುಕ್ತವಾಗಿದೆ   

ಚಿಕ್ಕೋಡಿ: ಹಲವು ವರ್ಷಗಳಿಂದ ದಿನಬಳಕೆಯ ನೀರಿನ ಮೂಲಗಳಾದ ಸಾರ್ವಜನಿಕ ತೆರೆದ ಬಾವಿಗಳು ನಿರ್ವಹಣೆಯಿಲ್ಲದೇ ನಿಷ್ಪ್ರಯೋಜಕವಾಗಿವೆ. ತ್ಯಾಜ್ಯದ ಗುಂಡಿಗಳಂತಾಗಿ ಹೋಗಿವೆ.

ಜಲಮೂಲಗಳ ಸಂರಕ್ಷಣೆಗೆ ಜಾಗೃತಿ ಅಭಿಯಾನ ನಡೆಯುತ್ತಿರುವ ಇಂದಿನ ದಿನಗಳಲ್ಲಿ ಲಭ್ಯವಿರುವ ಜಲಮೂಲವನ್ನು ಸಂರಕ್ಷಿಸಿ ಸದ್ಬಳಕೆ ಮಾಡಿಕೊಳ್ಳುವಲ್ಲಿ ಸ್ಥಳೀಯ ಸಂಸ್ಥೆ ನಿರ್ಲಕ್ಷ್ಯ ವಹಿಸಿದೆ. ನಾಲ್ಕು ದಶಕಗಳ ಹಿಂದೆ ತೋಡಿರುವ 8 ತೆರೆದ ಬಾವಿಗಳ ಪೈಕಿ ಬಹುತೇಕ ಬಾವಿಗಳಲ್ಲಿ ಇಂದಿಗೂ ನೀರಿನ ಝರಿಗಳು ಜೀವಂತವಾಗಿವೆ. ಆದರೆ, ನಿರ್ವಹಣೆ ಇಲ್ಲದೇ ಹೂಳು ಮತ್ತು ತ್ಯಾಜ್ಯಗಳಿಂದ ತುಂಬಿ ಹೋಗಿವೆ; ನೀರು ಮಲಿನಗೊಂಡಿದೆ. ಕೆಲವು ಬಾವಿಗಳ ಸಂರಕ್ಷಣಾ ಗೋಡೆಗಳೂ ಕುಸಿಯುವ ಹಂತದಲ್ಲಿವೆ.

ಸುತ್ತಲೂ ಬೆಟ್ಟಗುಡ್ಡಗಳಿಂದ ಆವರಿಸಿರುವ ಪಟ್ಟಣಕ್ಕೆ ಮೂರ್ನಾಲ್ಕು ದಶಕಗಳಿಂದ ಸಮೀಪದ ವಡ್ರಾಳ ಕೆರೆಯ ಆಸರೆಯಾಗಿತ್ತು. ಅದಕ್ಕೂ ಮುನ್ನ ಪಟ್ಟಣದಲ್ಲಿ ಈ ಸರ್ಕಾರಿ ಬಾವಿಗಳನ್ನು ತೋಡಲಾಗಿತ್ತು. ಬಾವಿಗಳಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗಿದ್ದರಿಂದ ಅದನ್ನು ಸಾರ್ವಜನಿಕರು ಬಟ್ಟೆ–ಬರೆ ತೊಳೆಯಲು ಉಪಯೋಗಿಸುತ್ತಿದ್ದರು. ಪಟ್ಟಣದ ಜನಸಂಖ್ಯೆ ಹೆಚ್ಚಳ ಮತ್ತು ನೀರಿನ ಬೇಡಿಕೆ ಹೆಚ್ಚಾದ ಪರಿಣಾಮವಾಗಿ ಕೃಷ್ಣಾ ನದಿಯಿಂದ ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ತೆರೆದ ಈ ಬಾವಿಗಳತ್ತ ಸಾರ್ವಜನಿಕರಾಗಲಿ, ಆಡಳಿತ ವರ್ಗವಾಗಲಿ ಗಮನಹರಿಸಿಲ್ಲ.

ADVERTISEMENT

ಮಹಾವೀರ ನಗರ ಬಳಿ ಗಾಂಧಿ ಬಾವಿ, ಗಾಂಧಿ ಮಾರ್ಕೆಟ್‌, ಅಂಕಲಿ ರಸ್ತೆ, ಬಾರಾ ಇಮಾಮ್‌ ತೆಕ್ಕೆ ಮೊದಲಾದ ಪ್ರದೇಶಗಳಲ್ಲಿರುವ ತೆರೆದ ಬಾವಿಗಳು ಶಿಥಿಲಾವಸ್ಥೆಯಲ್ಲಿವೆ. ಹೂಳು ತೆರವುಗೊಳಿಸಿ ದುರಸ್ತಿಪಡಿಸಿದರೆ ಜನರಿಗೆ ನೀರಿನ ಅನುಕೂಲ ಮಾಡಿಕೊಡಬಹುದಾಗಿದೆ.

‘ಇತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಹಳ್ಳಕೊಳ್ಳಗಳಲ್ಲೂ ನೀರು ಹರಿಯುತ್ತಿಲ್ಲ. ಇದರಿಂದಾಗಿ ಜಲಮೂಲಗಳು ಕ್ಷೀಣಿಸುತ್ತಿವೆ. ನೈಸರ್ಗಿಕವಾಗಿರುವ ಬಾವಿಗಳಂತಹ ಜಲ ಮೂಲಗಳನ್ನೂ ಸಂರಕ್ಷಣೆ ಮಾಡುವತ್ತ ವಿಶೇಷ ಮುತುವರ್ಜಿ ವಹಿಸಬೇಕು’ ಎಂದು ಸಾಹಿತಿ ಪ್ರೊ.ಎಸ್‌.ವೈ. ಹಂಜಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.