ADVERTISEMENT

ಜಾಗತಿಕವಾಗಿ ಬೆಳೆಯಲು ಎನ್‌ಇಪಿ ಸಹಕಾರಿ: ಡಾ.ಸಿ.ಎನ್. ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 13:24 IST
Last Updated 13 ಅಕ್ಟೋಬರ್ 2021, 13:24 IST
ಬೆಳಗಾವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಬುಧವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಿದರು. ಪ್ರೊ.ಎಂ.ಎಸ್. ಪದ್ಮಶಾಲಿ, ಹಣಮಂತ ನಿರಾಣಿ, ಮಹಾಂತೇಶ ಕವಟಗಿಮಠ, ಪ್ರೊ.ಎಂ. ರಾಮಚಂದ್ರಗೌಡ, ಅರುಣ ಶಹಾಪೂರ ಹಾಗೂ ಜ್ಯೋತಿ ಕವಳೇಕರ ಇದ್ದಾರೆಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಬುಧವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಿದರು. ಪ್ರೊ.ಎಂ.ಎಸ್. ಪದ್ಮಶಾಲಿ, ಹಣಮಂತ ನಿರಾಣಿ, ಮಹಾಂತೇಶ ಕವಟಗಿಮಠ, ಪ್ರೊ.ಎಂ. ರಾಮಚಂದ್ರಗೌಡ, ಅರುಣ ಶಹಾಪೂರ ಹಾಗೂ ಜ್ಯೋತಿ ಕವಳೇಕರ ಇದ್ದಾರೆಪ್ರಜಾವಾಣಿ ಚಿತ್ರ   

ಬೆಳಗಾವಿ: ‘ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯು ದೇಶವು ಜಾಗತಿಕ ಮಟ್ಟದಲ್ಲಿ ಬೆಳೆಯಲು ನೆರವಾಗಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ) ಸಹಯೋಗದಲ್ಲಿ ಇಲ್ಲಿನ ನೆಹರೂ ನಗರದ ಕೆಎಲ್ಇ ಜೀರಗೆ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ‘ಎನ್‌ಇಪಿ ಅನುಷ್ಠಾನದ ದಿಟ್ಟ ಹೆಜ್ಜೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಸ್ವಾತಂತ್ರ್ಯ ನಂತರ ಅಳವಡಿಸಿಕೊಳ್ಳಲಾಗುತ್ತಿರುವ 3ನೇ ಶಿಕ್ಷಣ ನೀತಿ ಇದಾಗಿದೆ. 34 ವರ್ಷಗಳ‌ ನಂತರ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಮಾಡಲಾಗಿದೆ. ಇದರಿಂದ ಕಲಿಕೆಯಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಹಾಗೂ ಸ್ಪಷ್ಟ ಗುರಿಗಳನ್ನು ಹೊಂದಿದೆ’ ಎಂದು ಸಮರ್ಥಿಸಿಕೊಂಡರು.

ADVERTISEMENT

ಮೀಸಲಾತಿ ತೆಗೆಯುವುದಿಲ್ಲ

‘ಪ್ರಥಮ್ ಸಂಸ್ಥೆಯ ಸಮೀಕ್ಷೆಯ ಪ್ರಕಾರ‌, ಪ್ರಾಥಮಿಕ, ಪ್ರೌಢ ಶಿಕ್ಷಣ ದಾಖಲಾತಿ ಶೇ 30ರಷ್ಟಿದೆ. ಉನ್ನತ ಶಿಕ್ಷಣದ ದಾಖಲಾತಿ ಪ್ರಮಾಣ ಶೇ 26ರಷ್ಟಿದೆ. ಈ ಪ್ರಮಾಣ ಹೆಚ್ಚಿಸಲು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುವುದು. 2030ರ ಒಳಗೆ ಎಲ್ಲರಿಗೂ ಅಕ್ಷರ ಜ್ಞಾನ ನೀಡಲಾಗುವುದು’ ಎಂದು ತಿಳಿಸಿದರು.

‘ನೀತಿಯಲ್ಲಿ ಮೆರಿಟ್‌, ವಿದ್ಯಾರ್ಥಿವೇತನ ಹಾಗೂ ಮೀಸಲಾತಿ ತೆಗೆದು ಹಾಕಲಾಗುವುದಿಲ್ಲ. ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಯಾವುದೇ ಗೊಂದಲಗಳಿಗೆ ಒಳಗಾಗಬಾರದು. ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಗೆ ನೀಡಿರುವ ಮಾಹಿತಿಯನ್ನು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವೇತನಕ್ಕೆ ಮಾತ್ರ ಬಳಸಬೇಕು

‘ವಿದ್ಯಾರ್ಥಿಗಳಿಂದ ಪಡೆದ ಹಣವನ್ನು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಾಗೂ ಪ್ರಾಧ್ಯಾಪಕರ ವೇತನಕ್ಕೆ ಮಾತ್ರ ಬಳಸಬೇಕು’ ಎಂದು ಸೂಚಿಸಿದರು.

‘ಪ್ರತಿ ವರ್ಷ ಪ್ರಾ‌ಧ್ಯಾಪಕರ ನೇಮಕಾತಿ ಮಾಡಿಕೊಳ್ಳಲಾಗುವುದು. ಉಪನ್ಯಾಸಕರು ಮತ್ತು ಪ್ರಾಧ್ಯಾಪಕರಿಗೆ ತರಬೇತಿ ನೀಡಲಾಗುವುದು. ಶಿಕ್ಷಣ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಲಾಗುವುದು. ಅಧಿಕಾರದ ವಿಕೇಂದ್ರೀಕರಣ ಮಾಡಲಾಗುವುದು. ಗುಣಮಟ್ಟದ ಶಿಕ್ಷಣ ಹಾಗೂ ಸಂಪನ್ಮೂಲ ನೀಡಲಾಗುವುದು. ಪ್ರತಿ ವರ್ಷ‌ 5 ಲಕ್ಷ ಜನರಿಗೆ ಡಿಜಿಟಲ್‌ ತರಬೇತಿ ನೀಡಲಾಗುವುದು’ ಎಂದು ವಿವರಿಸಿದರು.

ಕರ್ನಾಟಕ ಮುಂದೆ ಬಂದಿದೆ

ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ, ‘ಶಿಕ್ಷಣ ನೀತಿಯನ್ನು ಕಾರ್ಯ ರೂಪಕ್ಕೆ ತರುವ ಕೆಲಸವನ್ನು ರಾಜ್ಯಗಳಿಗೆ ವಹಿಸಿದಾಗ ಮುಂದೆ ಬಂದಿದ್ದು ಕರ್ನಾಟಕ. ಇದರ ಕೀರ್ತಿ ಸಚಿವ ಅಶ್ವತ್ಥನಾರಾಯಣ ಅವರಿಗೆ ಸಲ್ಲುತ್ತದೆ’ ಎಂದು ಶ್ಲಾಘಿಸಿದರು.

ಪ್ರೊ.ಗಂಗಾಧರಯ್ಯ, ವಿಧಾನಪರಿಷತ್‌ ಸದಸ್ಯ ಅರುಣ ಶಹಾಪೂರ, ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿದರು.

ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ಗೋಪಾಲಕೃಷ್ಣ ಜೋಶಿ ಹಾಗೂ ರಾಮಯ್ಯ ಸಾರ್ವಜನಿಕ ನೀತಿ ಕೇಂದ್ರದ ಉಪನಿರ್ದೇಶಕ ಡಾ.ಚೇತನ್ ಸಿಂಗಯ್ ಉಪನ್ಯಾಸ ನೀಡಿದರು.

ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್. ಪಾಟೀಲ, ಮೌಲ್ಯಮಾಪನ ಕುಲಸಚಿವ ಪ್ರೊ.ಎಸ್.ಎಂ. ಹುರಕಡ್ಲಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಇದ್ದರು.

ಆರ್‌ಸಿಯು ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಸ್ವಾಗತಿಸಿದರು. ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜ್ಯೋತಿ ಕವಳೇಕರ ವಂದಿಸಿದರು.

ಎನ್‌ಇಪಿ ಸಹಕಾರಿ

ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಲು ಎನ್‌ಇಪಿ ಸಹಕಾರಿಯಾಗಲಿದೆ. ಜನರ ಜೀವನಮಟ್ಟ ಸುಧಾರಿಸುವುದಕ್ಕೂ ಅನುಕೂಲವಾಗಿದೆ.

–ಡಾ.ಸಿ.ಎನ್. ಅಶ್ವತ್ಥನಾರಾಯಣ, ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.