ADVERTISEMENT

ಬೆಳಗಾವಿ: ನೂತನ ಕಟ್ಟಡಗಳ ಉದ್ಘಾಟನೆ ಏ.20ರಂದು

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2022, 8:48 IST
Last Updated 19 ಏಪ್ರಿಲ್ 2022, 8:48 IST

ಬೆಳಗಾವಿ: ‘ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಬೆಳಗಾವಿ ಹಾಗೂ ಕಲಬುರಗಿ ಪ್ರಾಂತೀಯ ಕಚೇರಿಗಳ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಏ.20ರಂದು ಮಧ್ಯಾಹ್ನ 12.30ಕ್ಕೆ ಆಯೋಜಿಸಲಾಗಿದೆ’ ಎಂದು ಅಧ್ಯಕ್ಷ ಬಿ.ಎಚ್. ಕೃಷ್ಣಾರೆಡ್ಡಿ ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ಆಟೊ ನಗರದ ಆರ್‌ಎಎಂಸಿ ಕಾಲೇಜು ಹಿಂದಿನ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಸಮಾರಂಭ ನಡೆಯಲಿದೆ. ಕಲಬುರಗಿ ಕಚೇರಿಯನ್ನು ವರ್ಚುವಲ್‌ ಆಗಿ ಉದ್ಘಾಟಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಸಚಿವರಾದ ಉಮೇಶ ಕತ್ತಿ, ಶಶಿಕಲಾ ಜೊಲ್ಲೆ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ತರಬೇತಿ ಸಭಾಂಗಣವನ್ನು ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮತ್ತು ನ್ಯಾಯಾಲಯ ಸಭಾಂಗಣವನ್ನು ಕೆಎಲ್‌ಇ ಸೊಸೈಟಿ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಉದ್ಘಾಟಿಸುವರು’ ಎಂದು ಹೇಳಿದರು.

ADVERTISEMENT

80 ಸಿಎಗಳು ಕಪ್ಪುಪಟ್ಟಿಗೆ:‘ಬೆಳಗಾವಿ ವಿಭಾಗದಲ್ಲಿ 20 ಸಹಕಾರಿಗಳು ಗ್ರಾಹಕರಿಗೆ ಸರಿಯಾಗಿ ಠೇವಣಿ ನೀಡಿಲ್ಲದಿರುವುದು ಗೊತ್ತಾಗಿದೆ. ಆಡಿಟ್‌ನಲ್ಲಿ ಲೋಪ ಎಸಗಿದ ಕಾರಣಕ್ಕೆ 80 ಮಂದಿ ಲೆಕ್ಕಪತ್ರಗಳ ಪರಿಶೋಧಕರನ್ನು (ಸಿಎ) ಕಪ್ಪುಪಟ್ಟಿಗೆ ಸೇರಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ಸೌಹಾರ್ದ ಸಹಕಾರ ಸಂಸ್ಥೆಗಳ ಬಗ್ಗೆ ಠೇವಣಿದಾರರಿಂದ ದೂರು ಸ್ವೀಕೃತವಾದಲ್ಲಿ ಠೇವಣಿದಾರರಿಗೆ ಹಣ ಕೊಡಿಸಲು, ವಂಚನೆ ಮತ್ತು ಹಣಕಾಸು ಅವ್ಯವಹಾರದಲ್ಲಿ ತೊಡಗಿರುವ ಸಹಕಾರಿ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಜಾರಿಗೊಳಿಸಲು ಉನ್ನತ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಕಾರ್ಯಪಡೆ ಜಾರಿಗೆ ತರಲಾಗಿದೆ’ ಎಂದರು.

‘ರಾಜ್ಯದಲ್ಲಿ ಪ್ರಸ್ತುತ 5,534 ಸಹಕಾರಿಗಳು ನೋಂದಣಿಯಾಗಿವೆ. 62 ಲಕ್ಷ ಸದಸ್ಯರಿದ್ದಾರೆ. 55ಸಾವಿರ ಮಂದಿ ಉದ್ಯೋಗ ಕಂಡುಕೊಂಡಿದ್ದಾರೆ. ₹ 30,872 ಕೋಟಿ ದುಡಿಯುವ ಬಂಡವಾಳವಿದೆ. ₹ 1,047 ಕೋಟಿ ಷೇರು ಬಂಡವಾಳವಿದೆ. ₹27,352 ಕೋಟಿ ಠೇವಣಿಗಳಿವೆ. ₹ 20,596 ಕೋಟಿ ಸಾಲ ನೀಡಲಾಗಿದೆ. ₹ 2,270 ಕೋಟಿ ಕಾಯ್ದಿಟ್ಟ ನಿಧಿಗಳಿವೆ. ₹365 ಕೋಟಿ ಲಾಭ ಹೊಂದಿದೆ. 1,505 ಇ–ಸ್ಟ್ಯಾಂಪಿಂಗ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಬೆಳಗಾವಿ ಪ್ರಾಂತೀಯ ಕಚೇರಿ ವ್ಯಾಪ್ತಿಯಲ್ಲಿ 2,544 ಸೌಹಾರ್ದ ಸಹಕಾರಿಗಳು ನೋಂದಣಿಯಾಗಿವೆ. 2,048 ಕಾರ್ಯನಿರ್ವಹಿಸುತ್ತಿವೆ. 561 ಇ–ಸ್ಟ್ಯಾಂಪಿಂಗ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ’ ಎಂದು ತಿಳಿಸಿದರು.

‘ಸಹಕಾರ ಭಾರತಿ ಮತ್ತು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಜಂಟಿಯಾಗಿ ಕೇಂದ್ರಕ್ಕೆ ಸಲ್ಲಿಸಿದ ಮನವಿ ಪುರಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ ಸಚಿವರನ್ನು ನೇಮಿಸಿರುವುದು ಆಶಾದಾಯಕ ಬೆಳವಣಿಗೆ’ ಎಂದರು.

ನಿರ್ದೇಶಕರಾದ ಗುರುನಾಥ್ ಜಾಂತಿಕರ, ವಿಶ್ವನಾಥ ಚ. ಹಿರೇಮಠ, ವಿಶ್ವನಾಥ ಚ.ಹಿರೇಮಠ, ವೈ.ಟಿ. ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಪಾಟೀಲ, ಪ್ರಾಂತೀಯ ವ್ಯವಸ್ಥಾಪಕ ಬಸವರಾಜ ಹೊಂಗಲ ಇದ್ದರು.

ಸಕಾರಾತ್ಮಕವಾಗಿ ಸ್ಪಂದನೆ
ಸೌಹಾರ್ದ ಸಂಯುಕ್ತ ಸಹಕಾರಿಗಳಿಗೆ ಜಿಎಸ್‌ಟಿ ವಿಧಿಸುವುದು, ಅಧಿಕಾರಿಗಳಿಂದ ನೋಟಿಸ್ ಕಿರುಕುಳ ಮೊದಲಾದ ಸಮಸ್ಯೆಗಳನ್ನು ಸಚಿವ ಅಮಿತ್‌ ಶಾ ಅವರ ಗಮನಕ್ಕೆ ತರಲಾಗಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
–ಬಿ.ಎಚ್. ಕೃಷ್ಣಾರೆಡ್ಡಿ, ಅಧ್ಯಕ್ಷ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.