ಸಂಕೇಶ್ವರ (ಬೆಳಗಾವಿ ಜಿಲ್ಲೆ): ನಿಡಸೋಸಿಯ ದುರುದುಂಡೀಶ್ವರ ಮಠದ ಪಟ್ಟಾಧಿಕಾರಕ್ಕಾಗಿ ಮಠದ ಕಿರಿಯ ಶ್ರೀಗಳಾದ ನಿಜಲಿಂಗೇಶ್ವರ ಸ್ವಾಮೀಜಿ 21 ದಿನಗಳಿಂದ ಉಪವಾಸ ಮಾಡುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಮಠದ ಹಿರಿಯ ಶ್ರೀಗಳಾದ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ 79 ವರ್ಷ ವಯಸ್ಸಾದಾಗ (2023) ಆರೋಗ್ಯದ ಹಿತದೃಷ್ಟಿಯಿಂದ ಕಿರಿಯ ಸ್ವಾಮಿಗಳನ್ನು ಪಟ್ಟ ಕಟ್ಟಲು ನಿರ್ಧರಿಸಿದ್ದರು. ಈ ಕುರಿತು ಆಯ್ಕೆ ಸಮಿತಿಯು ಅನೇಕ ಕಡೆ ಪರಿಶೀಲಿಸಿ, ಕೊನೆಗೆ ರಾಮಕೃಷ್ಣ ಆಶ್ರಮದಲ್ಲಿ ಸೇವೆ ಸಲ್ಲಿಸುತ್ತಿದ್ದ ನಿಡಸೋಸಿ ಗ್ರಾಮದವರೇ ಆದ ಸ್ವಾಮಿ ಏಕಗವ್ಯಾನಂದ ಅವರನ್ನು ಆಯ್ಕೆ ಮಾಡಿತು. ನಂತರ ಅವರಿಗೆ ದೀಕ್ಷೆ ನೀಡಿ, ನಿಜಲಿಂಗೇಶ್ವರ ಸ್ವಾಮೀಜಿ ಎಂದು ನಾಮಕರಣ ಮಾಡಲಾಯಿತು.
ಉತ್ತರಾಧಿಕಾರಿಯಾಗಿ ನೇಮಕವಾಗುವ ಪೂರ್ವದಲ್ಲಿ 2023ರ ಮಾರ್ಚ್ 22ರಂದು ಶಿವಮೊಗ್ಗದ ಬಿಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆ ಹಾಗೂ ಗದಗಿನ ಸಿದ್ದರಾಮ ಸ್ವಾಮೀಜಿ, ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಜಂಗಮ ದೀಕ್ಷೆ ನೀಡಲಾಗಿದೆ. 2023ರ ಮೇ 4ರಂದು ಸಂಕೇಶ್ವರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ‘ಉತ್ತರಾಧಿಕಾರಿ ಪತ್ರ’ವನ್ನು ನೋಂದಣಿ ಮಾಡಲಾಗಿದೆ.
ಕರಾರಿನ ಪ್ರಕಾರ, ‘ಉತ್ತರಾಧಿಕಾರಿ ಪತ್ರವಾದ ಒಂದು ತಿಂಗಳ ನಂತರ ಉತ್ತರಾಧಿಕಾರಿಗೆ ಎಲ್ಲ ಹಕ್ಕುಗಳು ಲಭಿಸುತ್ತವೆ’ ಎಂದು ತಿಳಿಸಲಾಗಿದೆ. ಜತೆಗೆ, ಎಂಟು ಮುಖ್ಯ ಕರಾರುಗಳನ್ನೂ ಮಾಡಲಾಗಿದೆ. ದೈನಂದಿನ ಇಷ್ಟಲಿಂಗ ಪೂಜೆ, ಮಠದ ಪರಂಪರೆ ಪಾಲಿಸಬೇಕು ಎಂಬುದೂ ಅದರಲ್ಲಿ ಸೇರಿವೆ. ಯಾವುದನ್ನಾದರೂ ಪಾಲಿಸದಿದ್ದರೆ, ಉತ್ತರಾಧಿಕಾರ ತಾನಾಗಿಯೇ ರದ್ದಾಗುತ್ತದೆ ಎಂದೂ ಕರಾರಿನಲ್ಲಿ ಬರೆಯಲಾಗಿದೆ.
‘ಉತ್ತರಾಧಿಕಾರಿ ಪತ್ರ ನೋಂದಣಿಯಾಗಿ ಎರಡು ವರ್ಷಗಳಾದರೂ ಪಟ್ಟಾಭಿಷೇಕ ಅಥವಾ ಮಠದ ಯಾವುದೇ ಹಕ್ಕು ಲಭಿಸಿಲ್ಲ. ಈ ಕುರಿತು ಕಿರಿಯ ಶ್ರೀಗಳು ಭಕ್ತರ ಮೂಲಕ ಹಿರಿಯ ಶ್ರೀಗಳಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಈ ಹಿಂದೆ ಇದೇ ಕಾರಣಕ್ಕೆ ಎರಡು ಬಾರಿ ಉಪವಾಸ ಸತ್ಯಾಗ್ರಹ ಮಾಡಿದ್ದೇನೆ. ಆಗ ಬೇರೆಬೇರೆ ಮಠಗಳ ಹಿರಿಯ ಶ್ರೀಗಳು, ಸಮಾಜದ ಮುಖಂಡರು, ಆಯ್ಕೆ ಸಮಿತಿಯವರು ಪಟ್ಟಾಧಿಕಾರ ಮಾಡುವ ಭರವಸೆ ನೀಡಿದ್ದರಿಂದ ಸತ್ಯಾಗ್ರಹ ಕೈಬಿಟ್ಟಿದ್ದೆ. ಈ ಬಾರಿ ಬಸವ ಜಯಂತಿ ಬಳಿಕ ಪಟ್ಟಾಧಿಕಾರ ಮಾಡಿ ಪೂರ್ಣ ಅಧಿಕಾರ ಹಸ್ತಾಂತರಿಸುವ ಮಾತಾಗಿತ್ತು. ಅದರಂತೆ ಶ್ರೀಗಳು ನಡೆದುಕೊಂಡಿಲ್ಲ. ಬದಲಾಗಿ, ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನ್ಯಾಯಕ್ಕಾಗಿ ದೇವರ ಮೊರೆ ಹೋಗಿದ್ದು, ಉಪವಾಸ ಕುಳಿತಿದ್ದೇನೆ’ ಎಂದು ನಿಜಲಿಂಗೇಶ್ವರ ಶ್ರೀ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಐದು ಶಾಖಾ ಮಠ ಹಾಗೂ ಹಲವು ಶಿಕ್ಷಣ ಸಂಸ್ಥೆಗಳು ಇರುವ ಈ ಮಠವು ಅಂದಾಜು ₹300 ಕೋಟಿ ಆಸ್ತಿ ಹೊಂದಿದೆ.
Quote -
Cut-off box - ‘ಜನಾನುರಾಗಿ ಆಗದಿದ್ದರೆ ಪ್ರಯೋಜನವಿಲ್ಲ’ ‘ಮಠಾಧೀಶರು ಜನಾನುರಾಗಿ ಆಗಿರಬೇಕು. ಭಕ್ತರೊಂದಿಗೆ ಬೆರೆಯಬೇಕು. ನಿಡಸೋಸಿ ಮಠಕ್ಕೆ ದೊಡ್ಡ ಇತಿಹಾಸವಿದೆ. ಅದರ ಅರಿವು ಇರಬೇಕು. ಪರಂಪರೆ ಪದ್ಧತಿಗಳನ್ನು ಪಾಲಿಸಬೇಕು. ಆಗ ಮಾತ್ರ ಪಟ್ಟಕ್ಕೇರುವ ಅರ್ಹತೆ ಬರುತ್ತದೆ’ ಎಂದು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು ‘ಕಿರಿಯ ಶ್ರೀ ಬಗ್ಗೆ ನಾವೇನೂ ಅಪಪ್ರಚಾರ ಮಾಡಿಲ್ಲ. ಅವರೇ ಅನ್ಯತಾ ಭಾವಿಸಿದ್ದಾರೆ. ಯಾರು ಏನು ಬೇಕಾದರೂ ಆರೋಪ ಮಾಡಬಹುದು. ಎಲ್ಲವೂ ಸತ್ಯವಲ್ಲ. ಅವರು ಜನರ ಸ್ವಾಮೀಜಿ ಆಗಿ ಹೊರಹೊಮ್ಮಿದರೆ ಸಮಸ್ಯೆ ಬಗೆಹರಿಯುತ್ತದೆ’ ಎಂದರು. ‘ಕರೆಯಿಸಿ ಅನ್ಯಾಯ ಮಾಡುತ್ತಿದ್ದಾರೆ’ ‘ಹಿರಿಯ ಶ್ರೀಗಳೇ ನನ್ನ ಒತ್ತಾಯ ಮಾಡಿ ಕರೆತಂದಿದ್ದಾರೆ. ಚೆಕ್ ಮೇಲೆ ಸಹಿ ಮಾಡುವುದೂ ಸೇರಿ ಎಲ್ಲ ಅಧಿಕಾರ ನೀಡುವ ಪ್ರಮಾಣ ಮಾಡಿದ್ದಾರೆ. ಎರಡು ವರ್ಷವಾದರೂ ಮಾಡಿಲ್ಲ’ ಎಂದು ನಿಜಲಿಂಗೇಶ್ವರ ಶ್ರೀ ಹೇಳಿದರು. ‘ನನ್ನ ಹೆಸರು ಕೆಡಿಸಲು ಮಠಕ್ಕೆ ಯುವಕರನ್ನು ಕರೆಸಿ ಗಲಾಟೆ ಮಾಡಿಸಿದ್ದಾರೆ. ಇದರ ಪ್ರಕರಣ ದಾಖಲಾಗಿದೆ. ನಾನು ನನ್ನ ಹಕ್ಕು ಕೇಳಿದಾಗ ಹೊಸ ಕರಾರು ಪತ್ರ ಮಾಡಿಸಿದ್ದಾರೆ. ನಾನು ಮಠದ ಪರಂಪರೆ ಪಾಲಿಸುತ್ತಿದ್ದೇನೆ. ಎರಡು ವರ್ಷಗಳಲ್ಲಿ 400 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತರೊಂದಿಗೆ ಬೆರೆತಿದ್ದೇನೆ. ಇದಾವುದೂ ಅವರಿಗೆ ಬೇಡವಾಗಿದೆ. ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.