ADVERTISEMENT

1,400 ಗ್ರಾಮಗಳಲ್ಲಿ ‘ನಿಧಿ ಸಮರ್ಪಣಾ ಅಭಿಯಾನ’

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 5:14 IST
Last Updated 17 ಜನವರಿ 2021, 5:14 IST

ಬೆಳಗಾವಿ: ‘ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಕೈಗೊಂಡಿರುವ ನಿಧಿ ಸಮರ್ಪಣೆ ಅಭಿಯಾನಕ್ಕೆ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ವತಿಯಿಂದ ಸಂಪೂರ್ಣ ಸಹಯೋಗ ನೀಡಲಾಗುತ್ತಿದೆ’ ಎಂದು ಸಂಘಟನೆಯ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ತಿಳಿಸಿದರು.

‘ಶ್ರೀರಾಮ ಮಂದಿರ ರಾಷ್ಟ್ರ ಮಂದಿರದ ಪ್ರತೀಕವಾಗಿದೆ. ಹೀಗಾಗಿ ಹಿಂದೂ ಸಂತರು, ಸನ್ಯಾಸಿಗಳು, ಸಮಾಜದವರು ಮತ್ತು ಶ್ರೀರಾಮ ಭಕ್ತರ ಸಹಯೋಗದಲ್ಲಿ ವಿಎಚ್‌ಪಿಯು ಅಭಿಯಾನ ನಡೆಸುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ 1,400 ಗ್ರಾಮಗಳಲ್ಲಿ ನೆಲೆಸಿರುವ ಕುಟುಂಬಗಳನ್ನು ಅಭಿಯಾನದ ನಿಮಿತ್ತ ಸಂಪರ್ಕಿಸುವ ಯೋಜನೆ ರೂಪಿಸಲಾಗಿದೆ. ಜನರು ₹ 10, ₹ 100, ₹1000ವನ್ನು ಸಮರ್ಪಿಸಿ ಮುದ್ರಿತ ಕೂಪನ್‌ ಪಡೆಯಬಹುದು. ₹ 2ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ಅರ್ಪಿಸಿದವರಿಗೆ ರಸೀದಿ ನೀಡಲಾಗುವುದು. ಇದರಿಂದ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್‍ನಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಪಡೆಯಬಹುದು. ಅಭಿಯಾನದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗುತ್ತಿದೆ. ಮಂದಿರ ನಿರ್ಮಾಣಕ್ಕೆ ಎಲ್ಲರೂ ಕೈಲಾದಷ್ಟು ಆರ್ಥಿಕ ನೆರವು ನೀಡಬಹುದು’ ಎಂದು ತಿಳಿಸಿದರು.

ADVERTISEMENT

‘ಈಗಾಗಲೇ ಅಭಿಯಾನ ಅಲ್ಲಲ್ಲಿ ನಡೆಯುತ್ತಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯುವಕ ಮಂಡಳಗಳಿಂದ ಗಲ್ಲಿಗಳಲ್ಲಿ ಬೈಠಕ್‌ಗಳು ನಡೆಯುತ್ತಿದೆ. ನಗರವೊಂದರಲ್ಲೇ 600ಕ್ಕೂ ಹೆಚ್ಚಿನ ಬೈಠಕ್‌ಗಳು ನಡೆದಿವೆ. ನಗರದಲ್ಲಿ ಅಭಿಯಾನ ಮುಂದುವರಿಯಲಿದೆ. ಜ. 24 ಹಾಗೂ 31ರಂದು ತಾಲ್ಲೂಕಿನ ಗ್ರಾಮಗಳಲ್ಲಿ ನಿಧಿ ಸಂಗ್ರಹಿಸಲಾಗುವುದು’ ಎಂದರು.

ಕವಲಗುಡ್ಡದ ಸಿದ್ಧಸಂಸ್ಥಾನ ಮಠದ ಅಮರೇಶ್ವರ ಮಹಾರಾಜ, ಲಕ್ಕಪ್ಪ ಮಹಾರಾಜರು, ವಿಎಚ್‌ಪಿ ಜಿಲ್ಲಾ ಘಟಕದ ಆಧ್ಯಕ್ಷ ಶ್ರೀಕಾಂತ ಕದಂ, ಸಂಘಟನೆಯ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಆರ್.ಕೆ. ಬಾಗಿ, ಕೋಶಾಧ್ಯಕ್ಷ ಕೃಷ್ಣ ಭಟ್, ಡಾ.ಬಿ.ಜಿ. ಶಿಂಧೆ, ಹೇಮಂತ ಹಾವಳ, ವಿಜಯ ಜಾಧವ, ಆನಂದ ಕರಲಿಂಗಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.