ADVERTISEMENT

₹13,000 ಕೋಟಿ ವೆಚ್ಚದ 36 ರಾಷ್ಟ್ರೀಯ ಹೆದ್ದಾರಿ ಯೋಜನೆ ಉದ್ಘಾಟಿಸಿದ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 12:10 IST
Last Updated 22 ಫೆಬ್ರುವರಿ 2024, 12:10 IST
<div class="paragraphs"><p>ಬೆಳಗಾವಿಯಲ್ಲಿ ಗುರುವಾರ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಬಟನ್‌ ಒತ್ತುವ ಮೂಲಕ ರಾಷ್ಟ್ರೀಯ ಹೆದ್ದಾರಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು – ಪ್ರಜಾವಾಣಿ ಚಿತ್ರ</p></div>

ಬೆಳಗಾವಿಯಲ್ಲಿ ಗುರುವಾರ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಬಟನ್‌ ಒತ್ತುವ ಮೂಲಕ ರಾಷ್ಟ್ರೀಯ ಹೆದ್ದಾರಿಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು – ಪ್ರಜಾವಾಣಿ ಚಿತ್ರ

   

ಬೆಳಗಾವಿ: ‘ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವಂತೆ ಗ್ರೀನ್‌ ಕಾರಿಡಾರ್‌ ನಿರ್ಮಿಸುವುದು ನಮ್ಮ ಆದ್ಯತೆ. ಇಂಥ ಹೆದ್ದಾರಿಗಳು ಪ್ರಯಾಣದ ಸಮಯ, ವೆಚ್ಚ ಕಡಿಮೆ ಆಗುವುದಲ್ಲದೇ ಅಭಿವೃದ್ಧಿಗೆ ಪೂರಕವಾಗಿವೆ’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ನಗರದಲ್ಲಿ ಗುರುವಾರ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಉದ್ಘಾಟನೆ ಹಾಗೂ 18 ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ಕರ್ನಾಟಕ ರಾಜ್ಯ ಅತ್ಯಂತ ಸಂಪದ್ಭರಿತವಾಗಿದೆ. ಹೀಗಾಗಿ, ಕೇಂದ್ರವು ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳಿಗೆ ಹೆಚ್ಚು ಆದ್ಯತೆ ನೀಡಿದೆ. ರಾಜ್ಯದಲ್ಲಿ 8,200 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಇದೆ. ಇದನ್ನು ₹3 ಲಕ್ಷ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಶೇ 90ರಷ್ಟು ಕಾಮಗಾರಿಗಳು ಮುಗಿದಿವೆ’ ಎಂದರು.

ADVERTISEMENT

ಬೆಳಗಾವಿ– ಹುನಗುಂದ– ರಾಯಚೂರು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುತ್ತಿದೆ. ಇದರ ಅಂದಾಜು ವೆಚ್ಚವೇ ₹9,000 ಕೋಟಿ. ಈ ಕಾಮಹಾರಿ ಪೂರ್ಣಗೊಂಡರೆ ಬೆಳಗಾವಿ– ರಾಯಚೂರು ಮಧ್ಯದ ಪ್ರಯಾಣದ ಅವಧಿ ಮೂರೂವರೆ ತಾಸು ಕಡಿಮೆ ಆಗಲಿದೆ’ ಎಂದರು.

ಬೆಳಗಾವಿ– ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮಾಡಿ ಆರು ಮಾರ್ಗ ಮಾಡಲು ಬೇಡಿಕೆ ಇದೆ. ಇದಕ್ಕೆ ಸರ್ಕಾರ ಬದ್ಧವಾಗಿದೆ. ಅರಣ್ಯ ಇಲಾಖೆಯಿಂದ ಅನುಮತಿ ಕೊಡಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದು’ ಎಂದರು.

‘ಬೆಳಗಾವಿ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು ವರ್ತುಲ ರಸ್ತೆ ನಿರ್ಮಾಣ ಮಾಡಬೇಕು ಎಂಬ ಬೇಡಿಕೆ ಹಳೆಯದು. ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರೂ ಇದರ ಬಗ್ಗೆ ಗಮನ ಸೆಳೆದಿದ್ದರು. ಶೀಘ್ರದಲ್ಲೇ ಇದು ಕೈಗೂಡಲಿದೆ’ ಎಂದರು.

‘ಬೆಂಗಳೂರಿಗೆ ₹17 ಸಾವಿರ ಕೋಟಿ ವೆಚ್ಚದ ರಿಂಗ್ ರಸ್ತೆ ನಿರ್ಮಿಸಲಾಗುತ್ತಿದೆ. ಮಹಾನಗರದ ದಟ್ಟಣೆ ತಗ್ಗಿಸುವ ಉದ್ದೇಶದಿಂದ 2025ರೊಳಗೆ ಈ ಕಾಮಗಾರಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ. ಇದು ಬೆಂಗಳೂರಿಗೆ ಮಾತ್ರವಲ್ಲ; ಇಡೀ ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡುವ ರಸ್ತೆ ಆಗಲಿದೆ’ ಎಂದು ಸಚಿವ ನಿತಿನ್‌ ಗಡ್ಕರಿ ಹೇಳಿದರು.

₹3,400 ಕೋಟಿ ವೆಚ್ಚದಲ್ಲಿ ಬೈಪಾಸ್‌:

ಬೆಳಗಾವಿ– ಗೋವಾ ಬೈಪಾಸ್‌ ರಸ್ತೆ ಕಾಮಗಾರಿಗೆ ತುರ್ತಾಗಿ ಆಗಬೇಕಿದೆ. ಇದಕ್ಕೆ ₹3,400 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದಲ್ಲದೇ, ಲೋಕೋಪಯೋಗಿ ಇಲಾಖೆಯಿಂದ 17 ಯೋಜನೆಗಳ ಬೇಡಿಕೆ ಸಲ್ಲಿಸಲಾಗಿದೆ. ಇವುಗಳನ್ನೂ ಸಕಾರಾತ್ಮಕವಾಗಿ ಪರಿಶೀಲಿಸಲಾಗುತ್ತಿದೆ. ಈಗಾಗಲೇ ಸಿ.ಆರ್‌.ಎಫ್‌. ಅಡಿ ₹2,000 ಕೋಟಿ ವೆಚ್ಚದ ಕಾಮಗಾರಿಗಳನ್ನು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಲಾಗಿದೆ’ ಎಂದರು.

ಸಚಿವ ಸತೀಶ ಜಾರಕಿಹೊಳಿ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಮಂಗಲಾ ಅಂಗಡಿ, ಪಿ.ಸಿ.ಗದ್ದಿಗೌಡರ, ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅಭಯ್ ಪಾಟೀಲ, ವಿಠ್ಠಲ ಹಲಗೇಕರ, ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಹಲವರು ವೇದಿಕೆ ಮೇಲಿದ್ದರು.

*

ಲೋಕಾರ್ಪಣೆ ಮಾಡಿದ ಪ್ರಮುಖ ರಸ್ತೆಗಳು

* ₹1622 ಕೋಟಿ ವೆಚ್ಚದ ಹೊನಗಾ– ಝಾಡಶಹಾಪುರ ಚತುಷ್ಪಥ ರಿಂಗ್ ರಸ್ತೆ

* ₹941 ಕೋಟಿ ವೆಚ್ಚದ ಚಿಕ್ಕೋಡಿ ಬೈಪಾಸ್‌ನಿಂದ– ಗೋಟೂರವರೆಗಿನ ಚತುಷ್ಪಥ

* ₹887 ಕೋಟಿ ವೆಚ್ಚದ ಶಿರಗುಪ್ಪಿಯಿಂದ ಅಂಕಲವರೆಗಿನ ರಸ್ತೆ ವಿಸ್ತರಣೆ

* ಒಟ್ಟು ₹13,000 ಕೋಟಿ ವೆಚ್ಚದ 680 ಕಿ.ಮೀ. ಉದ್ದದ 36 ರಾಷ್ಟ್ರೀಯ ಹೆದ್ದಾರಿ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.