ADVERTISEMENT

ಖಾನಾಪುರ: ಕಾನನವಾಸಿಗಳಿಗಿಲ್ಲ ಆರೋಗ್ಯ ಸೌಲಭ್ಯ

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ ತೊಡಕಾದ ನಿಯಮ

ಇಮಾಮ್‌ಹುಸೇನ್‌ ಗೂಡುನವರ
ಪ್ರಸನ್ನ ಕುಲಕರ್ಣಿ
Published 23 ಜೂನ್ 2023, 5:25 IST
Last Updated 23 ಜೂನ್ 2023, 5:25 IST
ಸರ್ಕಾರಿ ಆಸ್ಪತ್ರೆ ಹೊಂದಿರದ ಖಾನಾಪುರ ತಾಲ್ಲೂಕಿನ ಭಾಲ್ಕೆ ಖುರ್ದ್‌ ಗ್ರಾಮ
ಸರ್ಕಾರಿ ಆಸ್ಪತ್ರೆ ಹೊಂದಿರದ ಖಾನಾಪುರ ತಾಲ್ಲೂಕಿನ ಭಾಲ್ಕೆ ಖುರ್ದ್‌ ಗ್ರಾಮ    –ಪ್ರಜಾವಾಣಿ ಚಿತ್ರ

ಖಾನಾಪುರ: ‘ಕಾಡಿನೊಳಗಿರುವ ನಮ್ಮೂರಲ್ಲಿ ಸರ್ಕಾರಿ ಆಸ್ಪತ್ರೆ ಇಲ್ಲ. ಒಬ್ಬ ವೈದ್ಯಕೀಯ ಸಿಬ್ಬಂದಿ ಇಲ್ಲಿ ಬರುವುದಿಲ್ಲ. ತುರ್ತು ಚಿಕಿತ್ಸೆಯ ಪರಿಚಯವೇ ಇಲ್ಲ. ಆರೋಗ್ಯ ಹದಗೆಟ್ಟರೆ, 17 ಕಿ.ಮೀ ದೂರದ ಖಾನಾಪುರ ಅಥವಾ 16 ಕಿ.ಮೀ ದೂರದ ಲೋಂಡಾಕ್ಕೆ ಹೋಗಬೇಕು. ಅಲ್ಲಿಗೆ ಹೋಗಲು ವಾಹನ ಸೌಕರ್ಯವೂ ಇಲ್ಲ. ವಾಹನಗಳ ಸಂಚಾರಕ್ಕೆ ರಸ್ತೆಯೂ ಇಲ್ಲ. ನಮ್ಮ ಸ್ಥಿತಿ ದೇವರಿಗೆ ಪ್ರೀತಿ...’

ತಾಲ್ಲೂಕಿನ ಭಾಲ್ಕೆ ಖುರ್ದ್‌ ಗ್ರಾಮದ ವೃದ್ಧೆ ಯಶೋದಾ ಸುತಾರ ಹೀಗೆ ಹೇಳುವಾಗ, ಅವರ ಭಾವಗಳಲ್ಲಿ ಸಂಕಟ ವ್ಯಕ್ತವಾಗುತಿತ್ತು. ದಿಕ್ಕು ತೋಚದ ಸ್ಥಿತಿ ಅವರಿಗೆ ಕಾಡುತಿತ್ತು.

ಇದು ಅವರೊಬ್ಬರದ್ದೇ ಸಂಕಷ್ಟವಲ್ಲ. ದಟ್ಟ ಅರಣ್ಯದಿಂದ ಸುತ್ತುವರಿದ ಖಾನಾಪುರ ತಾಲ್ಲೂಕಿನ ಭಾಲ್ಕೆ ಬುದ್ರುಕ್, ಶಿಂಪೇವಾಡಿ, ಕಿರಾವಳೆ, ಅಂಬೇವಾಡಿ, ಜಾಂಬೋಟಿ, ಗುಂಜಿ, ಮಾಣಿಕವಾಡಿ ಸೇರಿ 30ಕ್ಕೂ ಅಧಿಕ ಗ್ರಾಮಗಳ ನಿವಾಸಿಗಳ ದಯನೀಯ ಸ್ಥಿತಿಯಿದು.

ADVERTISEMENT

ಸುಮಾರು 2.60 ಲಕ್ಷ ಜನಸಂಖ್ಯೆ ಹೊಂದಿರುವ ಖಾನಾಪುರ ತಾಲ್ಲೂಕಿನಲ್ಲಿ 256 ಗ್ರಾಮಗಳಿವೆ. ಒಂದು ತಾಲ್ಲೂಕು ಆಸ್ಪತ್ರೆ, ಒಂದು ಸಮುದಾಯ ಆರೋಗ್ಯ ಕೇಂದ್ರ ಹಾಗೂ 9 ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇವೆ. ಎಲ್ಲ ಕಡೆಯೂ ಸಿಬ್ಬಂದಿ ಕೊರತೆ ಇದೆ.

ಗಣೇಬೈಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈದ್ಯಾಧಿಕಾರಿ ಇಲ್ಲ. 17 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, 7 ಶುಶ್ರೂಷಾಧಿಕಾರಿಗಳು, 15 ಹಿರಿಯ ಆರೋಗ್ಯ ನಿರೀಕ್ಷಕರ ಹುದ್ದೆ ಖಾಲಿ ಇವೆ. ಮಾಣಿಕವಾಡಿ ಆರೋಗ್ಯ ಉಪಕೇಂದ್ರದವಂತೂ ಬೆಳಿಗ್ಗೆ 11 ಗಂಟೆಯಾದರೂ ತೆರೆಯುವುದಿಲ್ಲ.

ಜನ ಅತ್ಯಂತ ಅವಶ್ಯಕತೆಗಳಲ್ಲಿ ವೈದ್ಯಕೀಯ ಸೇವೆಯೂ ಒಂದು. ಸರ್ಕಾರ ಅದನ್ನೂ ಒದಗಿಸುತ್ತಿಲ್ಲ. ಹಾಗಾದರೆ ನಮ್ಮ ಜೀವಕ್ಕೆ ಬೆಲೆಯೇ ಇಲ್ಲವೇ?
–ರಾವಜಿ ಬಿರ್ಜೆ ಮಾಜಿ ಉಪಾಧ್ಯಕ್ಷ ಗುಂಜಿ ಗ್ರಾಮ ಪಂಚಾಯಿತಿ

ಒಂದೆಡೆ ವನ್ಯಮೃಗಗಳ ದಾಳಿಯ ಆತಂಕ, ಮತ್ತೊಂದೆಡೆ ಸರ್ಕಾರಿ ಆಸ್ಪತ್ರೆಗಳ ಅಭಾವ. ಕೆಲ ವರ್ಷಗಳ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಮೊಬೈಲ್‌ ಕ್ಲಿನಿಕ್‌ಗಳು ಉಸಿರು ನಿಲ್ಲಿಸಿವೆ. ರಸ್ತೆ ಸರಿ ಇಲ್ಲದ ಕಾರಣ ಆಂಬುಲೆನ್ಸ್‌ಗಳೂ ಬರುತ್ತಿಲ್ಲ.

‘ಖಾನಾಪುರದಿಂದ ಲೋಂಡಾ ಮಾರ್ಗವಾಗಿ 27 ಕಿ.ಮೀ ಅಂತರದಲ್ಲಿ ಒಂದು ಆರೋಗ್ಯ ಕೇಂದ್ರವೂ ಇಲ್ಲ. ಗುಂಜಿಯಲ್ಲಿ ನಾಡಕಚೇರಿ, ರೈಲ್ವೆ ಸ್ಟೇಷನ್‌, ಬ್ಯಾಂಕ್‌, ಸರ್ಕಾರಿ ಪ್ರೌಢಶಾಲೆ ಇದೆ. ಸರ್ಕಾರಿ ಆಸ್ಪತ್ರೆ ಇಲ್ಲ. ಶಾಸಕರು, ಅಧಿಕಾರಿಗಳು ಸ್ಪಂದಿಸಿಲ್ಲ’ ಎಂದು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾವಜಿ ಬಿರ್ಜೆ ತಿಳಿಸಿದರು.

ಶಿಂಧೊಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಬೇಕು ಎಂಬ ಠರಾವು ಗ್ರಾಮಸಭೆಯಲ್ಲಿ ತೆಗೆದುಕೊಂಡಿದ್ದೇವೆ. ಇಲಾಖೆ ಗಮನಕ್ಕೂ ತಂದಿದ್ದೇವೆ
- ಪ್ರಭಾಕರ ಭಟ್‌ ಪಿಡಿಒ ಶಿಂಧೊಳ್ಳಿ

ತೊಡಕಾದ ನಿಯಮ:

‘30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂ‌ದ್ರ ಸ್ಥಾಪಿಸುವ ನಿಯಮ ಆರೋಗ್ಯ ಇಲಾಖೆಯಲ್ಲಿದೆ. ಆದರೆ, ಕಾಡಂಚಿನ ಹಲವು ಗ್ರಾಮಗಳಲ್ಲಿ 200 ಜನಸಂಖ್ಯೆ ಇದ್ದರೇ ಹೆಚ್ಚು. ಅರಣ್ಯದೊಳಗಿರುವ ಗ್ರಾಮಗಳಿಗಾಗಿ ಈ ನಿಯಮ ಸಡಿಲಿಸಬೇಕು’ ಎಂದು ಗುಂಜಿಯ ಸುಭಾಷ ಘಾಡಿ ತಿಳಿಸಿದರು.

‘ಶಿಂಧೊಳ್ಳಿಯಲ್ಲಿ ಅವಕಾಶವಿದ್ದರೂ ಸರ್ಕಾರಿ ಆಸ್ಪತ್ರೆ ಕಟ್ಟಿಲ್ಲ. ಸಣ್ಣಪುಟ್ಟ ಸಮಸ್ಯೆಗೂ ಖಾನಾಪುರ ಇಲ್ಲವೇ ಬೆಳಗಾವಿಗೆ ಹೋಗಬೇಕು’ ಎಂದು ಪ್ರದೀಪ ಘಾಡಿ ಹೇಳಿದರು.

ಖಾನಾಪುರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಡಿಮೆ ಇವೆ. ಅವುಗಳನ್ನು ಆರಂಭಿಸುವಾಗ ಜನಸಂಖ್ಯೆಗಿಂತ ಭೌಗೋಳಿಕ ವ್ಯಾಪ್ತಿ ಪರಿಗಣಿಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ
–ವಿಠ್ಠಲ ಹಲಗೇಕರ ಶಾಸಕ ಖಾನಾಪುರ
ಖಾನಾಪುರ ಸೇರಿ ವಿವಿಧ ತಾಲ್ಲೂಕುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಕಾನನವಾಸಿಗಳಿಗೆ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು
- ಡಾ.ಮಹೇಶ ಕೋಣಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.