
ಬೆಳಗಾವಿ: ‘ಅಭಿವೃದ್ಧಿಯಲ್ಲಿ ತಾರತಮ್ಯ ನಿವಾರಿಸಬೇಕು ಇಲ್ಲವೇ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಆಗ್ರಹಿಸಿ ಕಾಗವಾಡದ ಕಾಂಗ್ರೆಸ್ ಶಾಸಕ ಭರಮಗೌಡ (ರಾಜು) ಕಾಗೆ ಅವರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದರು.
‘ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ ವಿಚಾರ ಪ್ರಸ್ತಾಪ ಮಾಡಲಾಗುವುದು. ಹೋರಾಟದ ನೇತೃತ್ವ ನಾನೇ ವಹಿಸುವೆ. ಈ ಭಾಗದ ಎಲ್ಲ ಶಾಸಕರೂ ನನ್ನ ಜೊತೆ ಇದ್ದಾರೆ ಎಂದು ಪತ್ರ ಬರೆದಿದ್ದೇನೆ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಅಭಿವೃದ್ಧಿ ವಿಷಯದಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ತೀರ ಹಿಂದುಳಿದಿದೆ. ದಕ್ಷಿಣ ಭಾಗಕ್ಕೆ ತೋರಿಸುವ ವಿಶೇಷ ಕಾಳಜಿ ಉತ್ತರಕ್ಕೆ ಏಕಿಲ್ಲ? ಎಲ್ಲರೂ ಕನ್ನಡನಾಡಿನ ಮಕ್ಕಳೇ. ಆದರೂ ಏಕೆ ಹೀಗೆ ಮಲತಾಯಿ ಧೋರಣೆ’ ಎಂದೂ ಅವರು ಪ್ರಶ್ನಿಸಿದರು.
ಶಾಸಕ ಕಾಗೆ ಅವರು ಈ ಹಿಂದೆಯೂ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.
ಪತ್ರದ ಸಾರಾಂಶ: ‘ಆಡಳಿತಾತ್ಮಕ ಅನುಕೂಲ ಮತ್ತು ಸಮಗ್ರ ಅಭಿವೃದ್ಧಿಗಾಗಿ ಉತ್ತರ ಕರ್ನಾಟಕದ 15 ಜಿಲ್ಲೆಗಳಾದ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ಉತ್ತರಕನ್ನಡ, ಹಾವೇರಿ, ವಿಜಯನಗರ, ಬಳ್ಳಾರಿ, ದಾವಣಗೆರೆ ಸೇರಿಸಿ ಹೊಸ ರಾಜ್ಯ ರಚಿಸಬೇಕು. ಕರ್ನಾಟಕ ಏಕೀಕರಣ ಆದಾಗಿನಿಂದ ಇಲ್ಲಿಯವರೆಗೆ ಈ ಎಲ್ಲ ಕ್ಷೇತ್ರಗಳಲ್ಲಿ ನಿರಂತರ ಅನ್ಯಾಯ, ತಾರತಮ್ಯ ಆಗಿದೆ. ಪ್ರತ್ಯೇಕ ರಾಜ್ಯ ರಚನೆಯಿಂದ ಮತ್ತೊಂದು ಕನ್ನಡ ನಾಡು ನಿರ್ಮಾಣವಾಗುವುದು ನಮಗೆ ಹೆಮ್ಮೆಯ ವಿಷಯ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
‘ಉತ್ತರ ಕರ್ನಾಟಕ ಹೋರಾಟ ಸಮಿತಿ ಜನಪ್ರತಿನಿಧಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ನನ್ನ ಬೆಂಬಲವಿದೆ. ಈಗಾಗಲೇ, ಕೋಟಿಗೂ ಅಧಿಕ ಜನರಿಂದ ಸಹಿ ಪಡೆದುಕೊಂಡಿದ್ದಾರೆ. ರಾಷ್ಟ್ರಪತಿ, ಪ್ರಧಾನಿಗೂ ಪತ್ರ ಬರೆದಿರುತ್ತಾರೆ. ಈ ಭಾಗದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಬೇಡಿಕೆ ಇಟ್ಟಿದ್ದಾರೆ ಎಂದೂ ಹೇಳಿದ್ದಾರೆ.
‘ಕಿತ್ತೂರು ಕರ್ನಾಟಕ’ ಧ್ವಜ ಹಾರಾಟ’
ಬೆಳಗಾವಿ: ‘ಕಿತ್ತೂರು ಕರ್ನಾಟಕದಲ್ಲಿ ಐಟಿ–ಬಿಟಿ ಕಂಪನಿ ಸ್ಥಾಪಿಸಬೇಕು. ಇಲ್ಲದಿದ್ದರೆ ಸುವರ್ಣ ವಿಧಾನಸೌಧದ ಮೇಲೆ ಕಿತ್ತೂರು ಕರ್ನಾಟಕ ಧ್ವಜ ಹಾರಿಸಬೇಕಾಗುವುದು’ ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಹೋರಾಟ ಸಮಿತಿ ಕಾರ್ಯಕರ್ತರು ಎಚ್ಚರಿಕೆ ಕೊಟ್ಟರು. ಸುವರ್ಣ ವಿಧಾನಸೌಧ ಬಳಿ ಮಂಗಳವಾರ ಧರಣಿ ನಡೆಸಿದ ಅವರು ‘ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿಯಾಗಿ ಘೋಷಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.