ADVERTISEMENT

ರಿಂಗ್‌ ರೋಡ್: ಕೃಷಿ ಭೂಮಿ ಸ್ವಾಧೀನಕ್ಕೆ ವಿರೋಧ

ರೈತರಿಗೆ ನೆರವಾಗಲು ವಿಶೇಷ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 14:21 IST
Last Updated 14 ಫೆಬ್ರುವರಿ 2019, 14:21 IST
ಬೆಳಗಾವಿ ತಾಲ್ಲೂಕು ಪಂಚಾಯ್ತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್‌ ಮಂಜುಳಾ ನಾಯಕ ಮಾತನಾಡಿದರು. ಇಒ ಪದ್ಮಜಾ ಪಾಟೀಲ, ಅಧ್ಯಕ್ಷ ಶಂಕರಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಮಾರುತಿ ಸನದಿ ಇದ್ದಾರೆ
ಬೆಳಗಾವಿ ತಾಲ್ಲೂಕು ಪಂಚಾಯ್ತಿಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತಹಶೀಲ್ದಾರ್‌ ಮಂಜುಳಾ ನಾಯಕ ಮಾತನಾಡಿದರು. ಇಒ ಪದ್ಮಜಾ ಪಾಟೀಲ, ಅಧ್ಯಕ್ಷ ಶಂಕರಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಮಾರುತಿ ಸನದಿ ಇದ್ದಾರೆ   

ಬೆಳಗಾವಿ: ನಗರದಲ್ಲಿ ರಿಂಗ್ ರೋಡ್ (ವರ್ತುಲ ರಸ್ತೆ) ನಿರ್ಮಾಣದಿಂದ ಕೃಷಿ ಭೂಮಿ ಕಳೆದುಕೊಳ್ಳುವ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ವಿಶೇಷ ಸಮಿತಿ ರಚಿಸಲು ತಾಲ್ಲೂಕು ಪಂಚಾಯ್ತಿ ಸದಸ್ಯರು ನಿರ್ಣಯಿಸಿದರು.

‌ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಯಿತು.

‘ರಸ್ತೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಸಚಿವಾಲಯವು ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

‘68.3 ಕಿ.ಮೀ. ರಸ್ತೆ ನಿರ್ಮಾಣಕ್ಕಾಗಿ 427 ಹೆಕ್ಟೇರ್ ಜಮೀನು ಸ್ವಾಧೀನಪಡಿಸಲು ಜ. 3ರಂದು ಅಧಿಸೂಚನೆ ಹೊರಡಿಸಿದೆ. ಆದರೆ, ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಪರಿಹಾರ ನೀಡುವ ಕುರಿತು ಯಾವುದೇ ಮಾಹಿತಿ ಇಲ್ಲ. ಯೋಜನೆಯಿಂದಾಗಿ, ಕೃಷಿಯನ್ನೇ ನಂಬಿಕೊಂಡಿರುವ ಸಣ್ಣ ಮತ್ತು ಅತಿ ಸಣ್ಣ ರೈತರು ಭೂಮಿ ಕಳೆದುಕೊಳ್ಳುತ್ತಿದ್ದಾರೆ. ಇದರಿಂದ ಅವರ ಕುಟುಂಬಗಳು ಬೀದಿಗೆ ಬೀಳುವ ಸಾಧ್ಯತೆ ಇದೆ’ ಎಂದು ಸದಸ್ಯರು ಕಳವಳ ವ್ಯಕ್ತಪ‍ಡಿಸಿದರು.

‘ಭೂಮಿ ಕಳೆದುಕೊಳ್ಳುವ ರೈತರ ವಾಸ್ತವ ಪರಿಸ್ಥಿತಿ ಅರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಸದಸ್ಯರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚನೆ ಅವಶ್ಯವಾಗಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಅಧ್ಯಕ್ಷ ಶಂಕರಗೌಡ ಪಾಟೀಲ, ‘ರೈತರ ಹಿತದೃಷ್ಟಿಯಿಂದ ಮತ್ತು ಸದಸ್ಯರ ಒತ್ತಾಯದ ಮೇರೆಗೆ ಸದಸ್ಯರನ್ನು ಒಳಗೊಂಡ ಸಮಿತಿ ರಚನೆಗೆ ನಿರ್ಣಯ ಕೈಗೊಳ್ಳಲಾಗಿದೆ. ಶೀಘ್ರವೇ ಸಮಿತಿಯು ರೈತರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದೆ’ ಎಂದು ಪ್ರಕಟಿಸಿದರು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಿದ್ದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ವರ್ಗದ ಸದಸ್ಯನನ್ನು ನೇಮಕ ಮಾಡಿರುವ ಇಒ ಎಡವಟ್ಟಿಗೆ ಸದಸ್ಯರು ಅಚ್ಚರಿ ವ್ಯಕ್ತಪಡಿಸಿದರು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಸ್ಥಾಯಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರನ್ನು ಆಯ್ಕೆ ಮಾಡಿರುವುದಕ್ಕೆ ಸದಸ್ಯ ಯಲ್ಲಪ್ಪ ಕೋಳೆಕರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ಇತರರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಉಪಾಧ್ಯಕ್ಷ ಮಾರುತಿ ಸನದಿ,ತಹಶೀಲ್ದಾರ್‌ ಮಂಜುಳಾ ನಾಯಕ, ಇಒ ಪದ್ಮಜಾ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.