ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸೇವಾ ನ್ಯೂನತೆಯಿಂದಾಗಿ ನೊಂದ ವಿದ್ಯಾರ್ಥಿನಿಗೆ ₹ 1 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.
ಬಾಗಲಕೋಟೆ ಕೌಲ್‌ಪೇಟೆಯ ಸಂಗಮಚಾಳದ ಗೀತಾ ಈರಪ್ಪ ಇಜಾರ್‌ದಾರ್ ದೂರು ದಾಖಲಿಸಿ ವಿಶ್ವವಿದ್ಯಾಲಯಕ್ಕೆ ಬಿಸಿ ಮುಟ್ಟಿಸಿದವರು.
ಅವರು ಆರ್‌ಸಿಯು ವ್ಯಾಪ್ತಿಯಲ್ಲಿ ಬರುವ ಬಾಗಲಕೋಟೆಯ ಬಸವೇಶ್ವರ ವಾಣಿಜ್ಯ ಕಾಲೇಜಿನಲ್ಲಿ 2015ರಲ್ಲಿ ಬಿ.ಕಾಂ. ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ಆದರೆ, ಅಂಕಪಟ್ಟಿ ಕೊಟ್ಟಿರಲಿಲ್ಲ. ಅಂಕಪಟ್ಟಿ ಇಲ್ಲದಿರುವುದರಿಂದಾಗಿ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಪಡೆಯುವುದಕ್ಕೆ ತೊಂದರೆಯಾಗಿತ್ತು. ಹಲವು ಉದ್ಯೋಗಗಳ ಅವಕಾಶದಿಂದ ವಂಚಿತರಾಗಿ ಮಾನಸಿಕವಾಗಿ ನೊಂದಿದ್ದರು. 2018ರ ಏ.24ರಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದ್ದರು.
ದೂರು ದಾಖಲಿಸಿಕೊಂಡಿದ್ದ ವೇದಿಕೆಯು ಆರ್‌ಸಿಯು ಹಾಗೂ ಬಸವೇಶ್ವರ ವಾಣಿಜ್ಯ ಕಾಲೇಜಿಗೆ ನೋಟಿಸ್ ಜಾರಿ ಮಾಡಿತ್ತು. ಬಳಿಕ ವೇದಿಕೆ ಎದುರು ಹಾಜರಾದ ಪ್ರತಿವಾದಿಗಳು ಗೀತಾ ಅವರ ಅಂಕಪಟ್ಟಿ ಹಾಜರುಪಡಿಸಿದ್ದರು. ವಾದ–ಪ್ರತಿವಾದ ಆಲಿಸಿದ ವೇದಿಕೆಯು, 2015ರಲ್ಲೇ ಪಾಸಾಗಿದ್ದರೂ ನಿಗದಿತ ಸಮಯದಲ್ಲಿ ಅಂಕಪಟ್ಟಿಗಳನ್ನು ಕೊಡದೇ ಸತಾಯಿಸಿರುವುದು ಮತ್ತು ಸೇವೆಯಲ್ಲಿ ನ್ಯೂನತೆ ಎಸಗಿರುವುದು ಕಂಡುಬಂದಿದೆ ಎಂದು ಆಯೋಗ ತಿಳಿಸಿದೆ. ಪದವಿ ಪಾಸಾದ ಬಗ್ಗೆ ಪ್ರಮಾಣಪತ್ರ ನೀಡದಿರುವುದರಿಂದ ವಿದ್ಯಾರ್ಥಿನಿಯು ಸರ್ಕಾರಿ, ಅರೆ ಸರ್ಕಾರಿ ನೌಕರಿಯಿಂದ ವಂಚಿತರಾಗಿದ್ದಾರೆ ಎಂದು ಹೇಳಿದೆ. ಇದಕ್ಕೆ ಪರಿಹಾರವಾಗಿ ₹ 1 ಲಕ್ಷ, ಮಾನಸಿಕ ವೇದನೆ ಕೊಟ್ಟಿದ್ದಕ್ಕಾಗಿ ₹ 1ಸಾವಿರವನ್ನು 30 ದಿನಗಳ ಒಳಗೆ ಕೊಡಬೇಕು ಎಂದು ಆದೇಶಿಸಿದೆ. ತಪ್ಪಿದಲ್ಲಿ ಪರಿಹಾರ ಮೊತ್ತವನ್ನು ಶೇ 9ರಂತೆ ಬಡ್ಡಿ ಸೇರಿಸಿ ಕೊಡುವಂತೆ ತಿಳಿಸಿದೆ.
ವೇದಿಕೆಯ ಅಧ್ಯಕ್ಷ ಬಿ.ವಿ. ಗುದ್ಲಿ ಮತ್ತು ಸದಸ್ಯೆ ಸುನೀತಾ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.