ADVERTISEMENT

ಬೆಳಗಾವಿ ಶೈಕ್ಷಣಿಕ ಜಿಲ್ಲೆ: 4 ಖಾಸಗಿ ಶಾಲೆಗಳಲ್ಲಷ್ಟೇ ‘ಆರ್‌ಟಿಇ’ ಸೀಟು!

ಸರ್ಕಾರಿ, ಅನುದಾನಿತ ಶಾಲೆಗಳಲ್ಲಿದ್ದಲ್ಲಿ ಅರ್‌ಟಿಇಯಡಿ ಪ್ರವೇಶವಿಲ್ಲ

ಎಂ.ಮಹೇಶ
Published 8 ಮೇ 2019, 19:46 IST
Last Updated 8 ಮೇ 2019, 19:46 IST
   

ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ‍್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಕೇವಲ 4 ಶಾಲೆಗಳಲ್ಲಷ್ಟೇ ಆರ್‌ಟಿಇ (ಕಡ್ಡಾಯ ಶಿಕ್ಷಣ ಹಕ್ಕು) ಕಾಯ್ದೆಯಡಿ ಉಚಿವಾಗಿ ಸೀಟುಗಳು ಲಭ್ಯವಾಗಲಿವೆ.

ಈ ಸಾಲಿಗೆ ಇಲ್ಲಿನ 44 ಶಾಲೆಗಳಷ್ಟೇ ಆಯ್ಕೆಯಾಗಿವೆ. ಇವುಗಳ ಪೈಕಿ 40 ಶಾಲೆಗಳು ಅನುದಾನಿತ ಶಾಲೆಗಳೇ. ಇವುಗಳಲ್ಲಿ 492 ಸೀಟುಗಳು ಲಭ್ಯವಿದ್ದು, 419 ಅರ್ಜಿಗಳಷ್ಟೇ ಸಲ್ಲಿಕೆಯಾಗಿವೆ! ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಸೀಟು ಹಂಚಿಕೆಯಾಗಿರುವುದೂ ಕಡಿಮೆಯೇ; ಅರ್ಜಿ ಸಲ್ಲಿಕೆಯಾಗಿರುವುದೂ ಕಡಿಮೆಯೇ. ಸರ್ಕಾರದ ಹೊಸ ನಿರ್ಧಾರದಿಂದಾಗಿ ಆರ್‌ಟಿಇ ಸೀಟುಗಳಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ.

2017–18 ಹಾಗೂ 2018–19ರಲ್ಲಿ ಆರ್‌ಟಿಇನಲ್ಲಿ 4,339 ಸೀಟುಗಳು ಲಭ್ಯವಿದ್ದವು. 2,743 ಮಕ್ಕಳು ಪ್ರವೇಶ ಪಡೆದಿದ್ದರು. ಈ ಸಾಲಿನಲ್ಲಿ ಹೊಸ ನಿಯಮದಿಂದಾಗಿ ಸೀಟುಗಳ ಸಂಖ್ಯೆ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಆರ್‌ಟಿಇ ಅಡಿ ಪ್ರವೇಶ ತೆಗೆದುಕೊಳ್ಳುವವರ ಸಂಖ್ಯೆ ಇಳಿಮುಖವಾಗುತ್ತಿದೆ.

ADVERTISEMENT

ಉದ್ದೇಶವೇನಿತ್ತು?

ಬಡ ಹಾಗೂ ಮಧ್ಯಮ ವರ್ಗದವರ ಮಕ್ಕಳು ಕೂಡ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಉಳ್ಳವರ ಮಕ್ಕಳೊಂದಿಗೆ ಓದಬೇಕು; ಅವರಿಗೆ ಅಲ್ಲಿ ಕಡ್ಡಾಯ ಮತ್ತು ಉಚಿತವಾಗಿ ಪ್ರವೇಶ ದೊರೆಯಬೇಕು; ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಕಾಯ್ದೆ ಜಾರಿಗೊಳಿಸಿದೆ. ಈ ಉದ್ದೇಶ ಈಡೇರಿಕೆಗೆ ಪೂರಕವಾದ ಬೆಳವಣಿಗೆಗಳು ಕೆಲವು ವರ್ಷಗಳವರೆಗೆ ನಡೆದಿದ್ದವು. ಆದರೆ, ಈ ವರ್ಷ ಬದಲಾದ ನಿಯಮದಿಂದಾಗಿ ಬಡ ಮಕ್ಕಳಿಗೆ ಖಾಸಗಿ ಶಾಲೆಗಳ ಪ್ರವೇಶ ಗಗನಕುಸುಮದಂತಾಗಿದೆ. ಇದರೊಂದಿಗೆ ಕಾಯ್ದೆಯಲ್ಲಿದ್ದ ಮೂಲ ಉದ್ದೇಶಗಳಿಗೆ ಸರ್ಕಾರವು ‘ಎಳ್ಳುನೀರು’ ಬಿಡಲು ಹೊರಟಂತಿದೆ. ಪೋಷಕರು ಒಂದು ವೇಳೆ ತಮ್ಮ ವ್ಯಾಪ್ತಿಯ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಬೇಕೆಂದರೆ ದುಬಾರಿ ಶುಲ್ಕ ಮತ್ತು ಡೊನೇಷನ್ ಪಾವತಿಸುವುದು ಅನಿವಾರ್ಯವಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸುವುದಕ್ಕೆ ಮುನ್ನವೇ, ಆರ್‌ಟಿಇ ಕಾಯ್ದೆಯಲ್ಲಿನ ನಿಯಮಗಳನ್ನು ಬದಲಾವಣೆ ಮಾಡಿರುವುದಕ್ಕೆ ಪೋಷಕರು ಹಾಗೂ ಶಿಕ್ಷಣ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿಯಮಗಳನ್ನು ಬದಲಾಯಿಸಲಾಗಿದೆಯೇ ಎಂಬ ಅನುಮಾನವೂ ಕಾಡುತ್ತಿದೆ.

ಬದಲಾದ ನಿಯಮವೇನು?

‘ಎಲ್ಲೆಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿವೆಯೋ ಆ ಭಾಗದ ಅನುದಾನಿತ ಅಥವಾ ಖಾಸಗಿ ಶಾಲೆಗಳಲ್ಲಿ ಆರ್‌ಟಿಇಒಯಲ್ಲಿ ಪ್ರವೇಶ ನೀಡಲಾಗುವುದಿಲ್ಲ’ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ. ಮಕ್ಕಳಿಗೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿಯೇ ಉಚಿತವಾಗಿ ಪ್ರವೇಶ ಕೊಡಲಾಗುತ್ತದೆ ಎಂದು ತಿಳಿಸಲಾಗಿದೆ. ಇದರಿಂದಾಗಿ ಬಹಳಷ್ಟು ಖಾಸಗಿ ಶಾಲೆಗಳು ಆರ್‌ಟಿಇ ವ್ಯಾಪ್ತಿಯಿಂದ ಹೊರಗುಳಿದಿವೆ. ಪರಿಣಾಮ, ಸೀಟುಗಳು ನೂರಾರು ಸಂಖ್ಯೆಯಲ್ಲಿ ಕಡಿಮೆಯಾಗಿವೆ. ಹಿಂದಿನ ಸಾಲಿನಲ್ಲಿ ಸಾವಿರಾರು ಸೀಟುಗಳು ಲಭ್ಯವಿದ್ದವು.

ಈ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯಲ್ಲಿ 7 ವಲಯಗಳು ಬರುತ್ತವೆ. ಖಾನಾಪುರ ವಲಯದಲ್ಲಿ 14 ಸೀಟುಗಳು ಲಭ್ಯವಿದೆಯಾದರೂ ಒಂದು ಅರ್ಜಿಯೂ ಬಂದಿಲ್ಲದಿರುವುದು ಹಾಗೂ ಬೈಲಹೊಂಗಲದಲ್ಲಿ 53 ಸೀಟುಗಳಿಗೆ ಕೇವಲ 19 ಅರ್ಜಿಗಳು ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.

‘ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದೆ. ಅಲ್ಲಿ ಮಧ್ಯಾಹ್ನದ ಬಿಸಿಯೂಟ, ಹಾಲು, ಪಠ್ಯಪುಸ್ತಕ, ಸಮವಸ್ತ್ರ ಮೊದಲಾದವುಗಳನ್ನೂ ಉಚಿತವಾಗಿ ಒದಗಿಸಲಾಗುತ್ತಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿದ್ದರೆ ಆ ವ್ಯಾಪ್ತಿಯಲ್ಲಿ ಆರ್‌ಟಿಇ ಅನ್ವಯವಾಗುವುದಿಲ್ಲ. ಹೀಗಾಗಿ, ಸೀಟುಗಳು ಹಾಗೂ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಾಗಿದೆ. ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಕಲಿಯಲಿ ಎನ್ನುವುದು ಸರ್ಕಾರದ ಉದ್ದೇಶವಾಗಿದೆ’ ಎಂದು ಡಿಡಿಪಿಐ ಆನಂದ ಪುಂಡಲೀಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.