ADVERTISEMENT

ಕನ್ನಡ ಕಡ್ಡಾಯಕ್ಕೆ ಮುಖಂಡರ ವಿರೋಧ

ಎಂಇಎಸ್‌ನಿಂದ ಮತ್ತೆ ಖ್ಯಾತೆ; ಜಿಲ್ಲಾಧಿಕಾರಿ ಆದೇಶಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 14:17 IST
Last Updated 15 ಜುಲೈ 2019, 14:17 IST
ಅಂಗಡಿ–ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಅಳವಡಿಸುವಂತೆ ಜಿಲ್ಲಾಧಿಕಾರಿ ಅವರು ಹೊರಡಿಸಿರುವ ಆದೇಶವನ್ನು ವಿರೋಧಿಸಿ ಎಂಇಎಸ್‌ ಮುಖಂಡರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಅಂಗಡಿ–ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಅಳವಡಿಸುವಂತೆ ಜಿಲ್ಲಾಧಿಕಾರಿ ಅವರು ಹೊರಡಿಸಿರುವ ಆದೇಶವನ್ನು ವಿರೋಧಿಸಿ ಎಂಇಎಸ್‌ ಮುಖಂಡರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ಜಿಲ್ಲೆಯ ಎಲ್ಲ ಅಂಗಡಿ–ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಅಳವಡಿಸುವಂತೆ ಜಿಲ್ಲಾಧಿಕಾರಿ ಅವರು ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಎಂಇಎಸ್‌ ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಇತ್ತೀಚೆಗೆ ನಡೆದ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಸ್‌.ಬಿ. ಬೊಮ್ಮನಹಳ್ಳಿ ಅವರು, ಜಿಲ್ಲೆಯ ಎಲ್ಲ ಅಂಗಡಿ–ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡವನ್ನು ಪ್ರಧಾನವಾಗಿ ಬರೆಯಿಸಬೇಕು. ಬರೆಯಿಸದೇ ಇರುವ ಮಳಿಗೆಗಳ ಲೈಸೆನ್ಸ್‌ ರದ್ದುಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದನ್ನು ವಿರೋಧಿಸಿ ಎಂಇಎಸ್‌ ಮುಖಂಡರು ಖ್ಯಾತೆ ತೆಗೆದಿದ್ದಾರೆ.

ಕನ್ನಡ ನಾಮಫಲಕದಿಂದ ನಷ್ಟವಂತೆ: ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದ ಎಂಇಎಸ್‌ ಮುಖಂಡ ಮನೋಹರ ಕಿಣೇಕರ್‌, ‘ಬೆಳಗಾವಿ, ಖಾನಾಪುರ, ನಿಪ್ಪಾಣಿ ಹಾಗೂ ಅಥಣಿ ತಾಲ್ಲೂಕುಗಳಲ್ಲಿ ಮರಾಠಿ ಭಾಷಿಕರು ಹೆಚ್ಚಾಗಿದ್ದಾರೆ. ಹೀಗಾಗಿ, ಮರಾಠಿಯಲ್ಲೇ ನಾಮಫಲಕಗಳನ್ನು ಅಳವಡಿಸಲು ಅನುಮತಿ ನೀಡಬೇಕು. ಕನ್ನಡವನ್ನು ಕಡ್ಡಾಯವಾಗಿ ಬರೆಯಿಸುವಂತೆ ಒತ್ತಡ ಹೇರಬಾರದು’ ಎಂದು ಆಗ್ರಹಿಸಿದರು.

ADVERTISEMENT

‘ಈ ಪ್ರದೇಶಗಳಲ್ಲಿ ಮಳಿಗೆಗಳಲ್ಲಿ ಕನ್ನಡ ಬರೆಸುವುದರಿಂದ ವ್ಯಾಪಾರಿಗಳು ನಷ್ಟ ಅನುಭವಿಸಬೇಕಾಗುತ್ತದೆ. ವ್ಯಾಪಾರಿಗಳಿಗೆ ನಷ್ಟ ಉಂಟಾದರೇ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ’ ಎಂದು ಕೆಲವು ಮುಖಂಡರು ಅಧಿಕ ಪ್ರಸಂಗದ ಹೇಳಿಕೆ ನೀಡಿದರು.

ಮರಾಠಿಯಲ್ಲಿಯೂ ಕಾಗದಪತ್ರ ನೀಡಿ: ‘ಮರಾಠಿ ಭಾಷಿಕರು ಹೆಚ್ಚಾಗಿರುವ ಗ್ರಾಮಗಳ ಸರ್ಕಾರಿ ಕಚೇರಿಗಳಲ್ಲಿ ಮರಾಠಿಯಲ್ಲಿಯೂ ಕಾಗದ ಪತ್ರಗಳನ್ನು ನೀಡಬೇಕು. ಸೂಚನಾ ಫಲಕಗಳನ್ನು ಕೂಡ ಮರಾಠಿಯಲ್ಲಿಯೂ ಅಳವಡಿಸಬೇಕು.ಬ್ಯಾಂಕುಗಳಲ್ಲಿ ಮರಾಠಿ ಭಾಷೆಯಲ್ಲಿ ವ್ಯವಹಾರ ನಡೆಸಲು ಸೂಚಿಸಬೇಕು. ಹಿಂಡಲಗಾ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯನ್ನು ಅಮಾನತು ಮಾಡಿರುವ ಆದೇಶವನ್ನು ಹಿಂಪಡೆಯಬೇಕು’ ಎಂದು ಮೊಂಡು ವಾದ ಮಂಡಿಸಿದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಪಾಟೀಲ, ಬಾವುರಾವ್‌ ಪಾಟೀಲ,ಶ್ಯಾಮ ಪಾಟೀಲ, ದತ್ತಾ ಉಗಾಡೆ, ನಿಂಗೋಜಿರಾವ ಹುದ್ದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.