ADVERTISEMENT

ಪ್ರಾದೇಶಿಕ ಆಯುಕ್ತರ ಕಚೇರಿಗಳ ರದ್ದು ಶಿಫಾರಸಿಗೆ ವಿರೋಧ

ಕನ್ನಡ ಸಂಘಟನೆಗಳ ಪ್ರತಿಭಟನೆ ಜುಲೈ 16ರಂದು

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 9:38 IST
Last Updated 13 ಜುಲೈ 2021, 9:38 IST
ಬೆಳಗಾವಿಯಲ್ಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ಕನ್ನಡ ಹೋರಾಟಗಾರರ ಸಭೆ ನಡೆಯಿತು
ಬೆಳಗಾವಿಯಲ್ಲಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ಕನ್ನಡ ಹೋರಾಟಗಾರರ ಸಭೆ ನಡೆಯಿತು   

ಬೆಳಗಾವಿ: ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಗೊಳಿಸಿ ಬೆಂಗಳೂರಿನಲ್ಲಿ ಒಂದೇ ಕಂದಾಯ ಸಚಿವಾಲಯ ಸ್ಥಾಪಿಸಬೇಕೆಂದು ಆಡಳಿತ ಸುಧಾರಣೆ ಆಯೋಗ ಮಾಡಿದ ಶಿಫಾರಸು ಅಂಗೀಕರಿಸಲು ಸರ್ಕಾರ ಚಿಂತಿಸಿರುವುದನ್ನು ವಿರೋಧಿಸಿ ಜುಲೈ 16ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ.

ನಗರದ ಶೆಟ್ಟಿ ಬೀದಿಯ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ಕಾರ್ಯಾಲಯದಲ್ಲಿ ಸೋಮವಾರ ನಡೆದ ಕನ್ನಡ ಹೋರಾಟಗಾರರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

‘ಆಯೋಗದ ಶಿಫಾರಸು ಅಂಗೀಕರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಮತ್ತು ಪ್ರಾದೇಶಿಕ ಆಯುಕ್ತರ ಕಚೇರಿಗಳು ಬಿಳಿಯಾನೆಗಳಾಗಿವೆ’ ಎಂಬ ಕಂದಾಯ ಸಚಿವ ಆರ್.ಅಶೋಕ ಅವರ ಹೇಳಿಕೆಯನ್ನು ಸಭೆ ಖಂಡಿಸಿತು. ‘ಬೆಂಗಳೂರಿನ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿರುವ ಬಿಳಿಯಾನೆಗಳ ಪಟ್ಟಿಯನ್ನು ಸಚಿವರು ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿತು.

ADVERTISEMENT

‘ಈ ಹಿಂದೆ ಅಸ್ತಿತ್ವದಲ್ಲಿದ್ದ ವಿಭಾಗಾಧಿಕಾರಿಗಳ ಕಚೇರಿಗಳನ್ನು ರದ್ದುಗೊಳಿಸಲಾಗಿತ್ತು. ನಂತರ ಉದ್ಭವಿಸಿದ ಸಮಸ್ಯೆಗಳ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಅಸ್ತಿತ್ವಕ್ಕೆ ತರಲಾಗಿತ್ತು. ಈಗ ಮತ್ತೆ ರದ್ದುಗೊಳಿಸುವುದು ಜನವಿರೋಧಿ ಕ್ರಮವಾಗಿದೆ’ ಎಂದು ಹೋರಾಟಗಾರರು ಆಕ್ಷೇಪಿಸಿದರು.

‘ಪ್ರಾದೇಶಿಕ ಆಯುಕ್ತರಿಗೆ ಭೂಸ್ವಾಧೀನ, ಪುನರ್ವಸತಿ, ಪ್ರವಾಹ ಮತ್ತು ಬರಗಾಲ ನಿರ್ವಹಣೆ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ–ಉಪಾಧ್ಯಕ್ಷರು ಹಾಗೂ ಮಹಾನಗರ ಪಾಲಿಕೆಗಳ ಮೇಯರ್– ಉಪಮೇಯರ್ ಚುನಾವಣೆ ನಿರ್ವಹಣೆ, ಅಣೆಕಟ್ಟೆಗಳಿಂದ ನೀರು ಬಿಡುಗಡೆ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ವಿರುದ್ಧದ ಪ್ರಕರಣಗಳ ವಿಚಾರಣೆ, ಸರ್ಕಾರಿ ಸಿಬ್ಬಂದಿಗೆ ವಸತಿಗೃಹಗಳ ಹಂಚಿಕೆ ಹಾಗೂ ಇನ್ನಿತರ ಅಧಿಕಾರಗಳಿವೆ. ಕಚೇರಿಗಳು ರದ್ದಾಗುವುದರಿಂದ ಸಾಮಾನ್ಯ ಜನರು ಬೆಂಗಳೂರಿಗೆ ದೌಡಾಯಿಸುವ ಪರಿಸ್ಥಿತಿ ಉಂಟಾಗುತ್ತದೆ. ಇಂತಹ ಜನವಿರೋಧಿ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಳ್ಳಬಾರದು’ ಎಂದು ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದರು.

ಮುಖಂಡರಾದ ಮೆಹಬೂಬ ಮಕಾನದಾರ, ಸಾಗರ ಬೋರಗಲ್ಲ, ಮೈನೋದ್ದೀನ್ ಮಕಾನದಾರ, ವೀರೇಂದ್ರ ಗೋಬರಿ, ಹರೀಶ ಕರಿಗೊನ್ನವರ, ಆದರ್ಶ ಅನಗೋಳ, ರಜತ ಅಂಕಲೆ, ಸೂರಜ ಹುಳಬತ್ತೆ, ಓಂಕಾರ ಮೋಳೆ, ರೋಹಿತ ಪದ್ಮನ್ನವರ, ಅಭಿನವ ಉಪಾಧ್ಯೆ, ಸುಶಾಂತ ಪಾಟೀಲ, ರಾಕೇಶ ಸಂಗನ್ನವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.