ಸವದತ್ತಿ: ತಾಲ್ಲೂಕಿನ ಕಿಟದಾಳ ಗ್ರಾಮದ 32 ಎಕರೆ ಗೈರಾಣ ಜಾಗದಲ್ಲಿ ಪಿ.ಎಂ ಕುಸುಮ್ ಯೋಜನೆ ಅಡಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿ ವಿರೋಧಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ಘಟಕ ನಿರ್ಮಾಣ ಖಂಡಿಸಿ ಘೋಷಣೆ ಕೂಗಿದರು.
‘ಮುನವಳ್ಳಿ ಹೋಬಳಿ ವ್ಯಾಪ್ತಿಯಲ್ಲಿನ ಕಿಟದಾಳ ಗ್ರಾಮದ ಸುತ್ತ ಬಯಲು ಪ್ರದೇಶ ಇದೆ. ಇಲ್ಲಿ ಗುಡ್ಡಗಾಡು ಪ್ರದೇಶವಿಲ್ಲ. ಕೃಷಿ ಕುಟುಂಬಗಳು ಹೆಚ್ಚು ಇರುವ ಕಾರಣ ಜಾನುವಾರುಗಳು ಮೇಯಲು ಗೈರಾಣ ಜಾಗ ಅನುಕೂಲವಾಗಿತ್ತು’ ಎಂದು ಗ್ರಾಮದ ಮುಖಂಡರು ಹೇಳಿದರು.
‘47 ಗೈರಾಣ ಜಾಗದಲ್ಲಿ ರಾಣಿ ಚನ್ನಮ್ಮ ವಸತಿ ಶಾಲೆಗೆ ಒಂಬತ್ತು ಎಕರೆ, 110 ಕೆ.ವಿ ವಿದ್ಯುತ್ ಪ್ರಸರಣ ಘಟಕಕ್ಕೆ ಮೂರು ಎಕರೆ, ಕನ್ನಡ ಪ್ರಾಥಮಿಕ ಶಾಲೆಗೆ ಐದು ಎಕರೆ ಹಾಗೂ ಸ್ಮಶಾನಕ್ಕಾಗಿ ಒಂದು ಎಕರೆ ನೀಡಲಾಗಿದೆ. ಇನ್ನುಳಿದ ಜಾಗವನ್ನು ಜಾನುವಾರುಗಳು ಮೇಯಲು ಮೀಸಲಿಡಬೇಕು’ ಎಂದು ಒತ್ತಾಯಿಸಿದರು.
‘ಪಿ.ಎಂ ಕುಸುಮ್ ಯೋಜನೆ ಅಡಿ ₹200 ಕೋಟಿ ಅನುದಾನದಲ್ಲಿ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಕಾಮಗಾರಿಯನ್ನು ಇಲ್ಲಿ ಆರಂಭಿಸಲಾಗಿದೆ. ಕಾಮಗಾರಿಗೆ ಪಂಚಾಯಿತಿಯಿಂದ ಅನುಮತಿ ಪಡೆದಿಲ್ಲ. ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಎಂ.ಎನ್. ಹೆಗ್ಗಣ್ಣವರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.
ದುರ್ಗಪ್ಪ ಮಾದರ, ಬಸವರಾಜ ಗೋಮಾಡಿ, ಗೋವಿಂದನಾಯ್ಕ ಪಾಟೀಲ, ಸುರೇಶ ಬುರ್ಜಿ, ಭೀಮರಾಯ ಸಾಲಿ, ಶಿವಪ್ಪ ಬಂಡ್ರೊಳ್ಳಿ, ಭೀಮಶಿ ಚಿಗರಿ, ವಿಠ್ಠಲ ಚಿಗರಿ, ವಿಠ್ಠಲ ಕಲಕುಟ್ರಿ, ಉಮೇಶ ಶೀಲವಂತ, ಶಾಬುದ್ದೀನ ಶಾಬಾದ, ಶಿವಾಜಿ ನಲವಡೆ, ಮಹಾದೇವಿ ಶೀಲವಂತ, ಜುಬೇದಾ ಜಿದ್ದಿಮನಿ, ಫಕ್ರುದ್ದೀನ್ ಶಾಬಾದ, ಪಕ್ಕೀರಪ್ಪ ಮುರಗೋಡ, ಮುದ್ದಪ್ಪ ಕಲಕುಟ್ರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.