
ಚನ್ನಮ್ಮನ ಕಿತ್ತೂರು: ಸಮೀಪದ ಪರಸನಟ್ಟಿ ಪ್ರದೇಶದಲ್ಲಿರುವ ಸರ್ಕಾರಿ ಗೋಮಾಳದಲ್ಲಿ ದಶಕಗಳಿಂದ ಉಳುಮೆ ಮಾಡುತ್ತ ಬಂದಿರುವ ಬಡ ರೈತರನ್ನು ಒಕ್ಕಲೆಬ್ಬಿಸಿದರೆ ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘಟನೆಯು ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಲ್ಲಿನ ತಹಶೀಲ್ದಾರ್ ಕಚೇರಿ ಎದುರು ಗುರುವಾರ ಆಯೋಜಿಸಿದ್ದ ಪ್ರತಿಭಟನೆ ಸಭೆಯಲ್ಲಿ ಸೇರಿದ್ದ ಪ್ರಮುಖ ರೈತ ಮುಖಂಡರು ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿದರು.
ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಅಧ್ಯಕ್ಷ ಎಂ. ಎಫ್. ಜಕಾತಿ ಮಾತನಾಡಿ, ‘ಪರಸನಟ್ಟಿ ಬಳಿ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರೇ ಹೆಚ್ಚು ಉಳುಮೆ ಮಾಡುತ್ತಿದ್ದಾರೆ. ಅವರೇನು ಹತ್ತಾರು ಎಕರೆ ಭೂಮಿ ಸಾಗುವಳಿ ಮಾಡುತ್ತಿಲ್ಲ. ಎರಡರಿಂದ ಸುಮಾರು 5 ಎಕರೆ ವರೆಗೆ 60 ವರ್ಷಗಳಿಂದ ಅವರ ಮನೆತನದವರು ಸಾಗುವಳಿ ಮಾಡುತ್ತ ಬಂದಿದ್ದಾರೆ. ಅವರೇನು ಶ್ರೀಮಂತ ರೈತರಲ್ಲ’ ಎಂದು ಪ್ರತಿಪಾದಿಸಿದರು.
ಮುಖಂಡ ಅಪ್ಪೇಶ ದಳವಾಯಿ ಮಾತನಾಡಿ ‘ಚಿಕ್ಕ, ಚಿಕ್ಕ ರೈತರು ಉಳುಮೆ ಮಾಡುತ್ತಿರುವ ಜಮೀನಿನಲ್ಲಿ ಸೋಲಾರ ಪ್ಲಾಂಟ್ ನಿರ್ಮಿಸಲು ಗುತ್ತಿಗೆದಾರರ ಮೂಲಕ ಸರ್ಕಾರ ಹೊರಟಿದೆ. ಬೇರೆ ಜಮೀನಿನಲ್ಲಿ ಪ್ಲಾಂಟ್ ನಿರ್ಮಾಣಕ್ಕೆ ಯೋಚಿಸಬೇಕು. ರೈತರ ಬದುಕಿನ ಜತೆಗೆ ಚಲ್ಲಾಟ ಆಡಬಾರದು’ ಎಂದರು.
ಕಬ್ಬು ಬೆಳೆಗಾರರ ಸಂಘದ ಮುಖಂಡ ಪ್ರವೀಣ ಸರದಾರ ಮಾತನಾಡಿ, ‘ಬದುಕಿಗಾಗಿ ಸಾಗುವಳಿ ಮಾಢುತ್ತಿರುವ ರೈತರ ಹೊಟ್ಟೆಯ ಮೇಲೆ ಸರ್ಕಾರ ಹೊಡೆಯಬಾರದು. ಸಾಗುವಳಿ ಮಾಡಲು ಅವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ನುಡಿದರು.
ನಾಗರತ್ನ ಪಾಟೀಲ ಮಾತನಾಡಿದರು. ಒಕ್ಕಲೆಬ್ಬಿಸದಂತೆ ತಹಶೀಲ್ದಾರ್ ಕಲಗೌಡ ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮುಖಂಡರಾದ ನಿಂಗಪ್ಪ ತಡಕೋಡ, ಪಕ್ಕೀರಪ್ಪ ಜಾಂಗಟಿ, ಬಸವರಾಜ ಕೆಳಗಡೆ, ಬಸವಣ್ಣೆಪ್ಪ ಚಲವಾದಿ, ವೆಂಕಟೇಶ ಹಂಚಿನಮನಿ, ಯಲ್ಲಪ್ಪ ಜಾಂಗಟಿ, ಅಣ್ಣಪ್ಪ ಗುಂಜಿ, ಭೀಮಣ್ಣ ಗರಗ, ಮಡಿವಾಳೆಪ್ಪ ಚಿನ್ನನ್ನವರ, ಅಬ್ದುಲ್ ರೆಹಮಾನ್ ಗಡಕರಿ, ಶಬ್ಬೀರಗೌಸ್ ಬೀಡಿ, ಸಂತರಾಮ ಭಾಸ್ಕರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.