ADVERTISEMENT

ಸವದತ್ತಿ: ಪಿಡಿಒ ಮೇಲೆ ಮಾರಣಾಂತಿಕ ಹಲ್ಲೆ ಖಂಡನೀಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 2:09 IST
Last Updated 9 ಅಕ್ಟೋಬರ್ 2025, 2:09 IST
ಸವದತ್ತಿ ಸಮೀಪದ ಮಾಡಮಗೇರಿ ಪಿಡಿಒ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಪಿಡಿಒ ಸಂಘದಿಂದ ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಲಾಯಿತು
ಸವದತ್ತಿ ಸಮೀಪದ ಮಾಡಮಗೇರಿ ಪಿಡಿಒ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಪಿಡಿಒ ಸಂಘದಿಂದ ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಲಾಯಿತು   

ಸವದತ್ತಿ: ಯರಗಟ್ಟಿ ತಾಲ್ಲೂಕಿನ ಮಾಡಮಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಇಲ್ಲಿನ ತಾಲ್ಲೂಕು ಆಡಳಿತ ಸೌಧದಲ್ಲಿ ಬುಧವಾರ ಕರ್ನಾಟಕ ಪಿಡಿಒ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘದಿಂದ ತಹಶೀಲ್ದಾರ್‌ ಎಂ.ಎನ್. ಹೆಗ್ಗನ್ನವರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಮಲ್ಲಪ್ಪ ಹಾರೂಗೊಪ್ಪ ಮಾತನಾಡಿ, ಗ್ರಾಮೀಣಾಭಿವೃದ್ಧಿ ಜವಾಬ್ದಾರಿ ಹೊತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ಇಲಾಖೆ ಹಾಗೂ ಸರ್ಕಾರದ ಘನತೆಗೆ ಕುಂದು ತರುತ್ತವೆ. ಇದು ಗ್ರಾಮೀಣಾಭಿವೃದ್ಧಿ ಕಾರ್ಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಅಧಿಕಾರಿಗಳ ಮೇಲಿನ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸುವುದು ಖಂಡನಾರ್ಹ ಎಂದರು.

ಅ.6ರಂದು ಮಾಡಮಗೇರಿ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಡಿಒ ಜಯಗೌಡ ಪಾಟೀಲ ಅವರಿಗೆ ನಾಲ್ವರು ನಕಲು ದಾಖಲೆ ಆಧಾರದಲ್ಲಿ ಇ-ಸ್ವತ್ತು ಫಹಣಿ ನೀಡಲು ಒತ್ತಾಯಿಸಿದ್ದಾರೆ. ಈ ಕಾನೂನು ಬಾಹಿರ ಬೇಡಿಕೆಯೆಂದು ನಿರಾಕರಿಸಿದ್ದು, ಅವಾಚ್ಯ ಪದಗಳಿಂದ ನಿಂದಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಗೂಂಡಾ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿ, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಪಿಡಿೊ ಮಹೇಶ ತೆಲಗಾರ ಮಾತನಾಡಿ, ಅಧಿಕಾರಿಗಳ ರಕ್ಷಣೆಗೆ ವಿಶೇಷ ಕಾಯ್ದೆ, ನಿಯಮಗಳ ಬಲವರ್ಧನೆ ಹಾಗೂ ಭದ್ರತೆ ಹೆಚ್ಚಿಸಬೇಕು. ಹಲ್ಲೆಗೆ ಒಳಗಾದ ಪಿಡಿಒ ಜಯಗೌಡರಿಗೆ ಸೂಕ್ತ ವೈದ್ಯಕೀಯ ನೆರವು ಮತ್ತು ಬೆಂಬಲ ಒದಗಿಸಿ, ಅಧಿಕಾರಿಗಳ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸಬೇಕು. ನಿರ್ಭಿತಿಯಿಂದ ಕಾರ್ಯ ನಿರ್ವಹಿಸಲು ಸೂಕ್ತ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.

ರಮೇಶ ಬೆಡಸೂರ, ರೇಣುಕಾ ನಾಡಗೌಡ, ಎ.ಎ. ಸುತಗಟ್ಟಿ, ಎ.ಬಿ. ಬಂಗಾರಿ, ಮಹಾದೇವ ಗಡೇಕಾರ, ವೈ.ಎನ್. ಮೂಡಲಗಿ, ಮಲ್ಲಯ್ಯ ಕಂಬಿ, ಸಿ.ಬಿ. ಹೀರೆಮಠ, ನಾಗರತ್ನಾ ಲಕ್ಕನ್ನವರ, ವಿಶಾಲಾಕ್ಷಿ ಕುರಹಟ್ಟಿ, ಸುಧೀರ ಪತ್ತಾರ, ಶೋಭಾ ಕೊಚಲಿಕರ, ಎಂ.ಐ. ಕಳ್ಳಿ, ಪಿ.ವಿ. ಅಗಸರ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.