ADVERTISEMENT

ಬೆಳಗಾವಿ: ‘ಶಾಂತಿ ಸ್ಮಾರಕ’ ಲೋಕಾರ್ಪಣೆ ಮಾರ್ಚ್‌ 5ರಂದು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 7:58 IST
Last Updated 4 ಮಾರ್ಚ್ 2021, 7:58 IST

ಬೆಳಗಾವಿ: ದಕ್ಷಿಣ ಭಾರತ ಜೈನ ಸಭೆಯ ಶಾಖೆಯಾದ ಮಾಣಿಕಬಾಗ್ ದಿಗಂಬರ ಜೈನ ಬೋರ್ಡಿಂಗ್‌ನಲ್ಲಿ ನಿರ್ಮಿಸಿರುವ ಜೈನ ಧರ್ಮದ ಪ್ರಥಮಾಚಾರ್ಯ ಶಾಂತಿಸಾಗರ ಮುನಿ ಸ್ಮಾರಕದ ಲೋಕಾರ್ಪಣೆ ಸಮಾರಂಭ ಮಾರ್ಚ್‌ 5ರ ಮಧ್ಯಾಹ್ನ 12ಕ್ಕೆ ನಡೆಯಲಿದೆ.

ಹಳೆ ಪಿ.ಬಿ. ರಸ್ತೆಯಲ್ಲಿರುವ ಬೋರ್ಡಿಂಗ್‌ ಆವರಣದ ಹಳೆಯ ಕಟ್ಟಡದ ನವೀಕರಿಸಿ ಭವನ ನಿರ್ಮಿಸಲಾಗಿದೆ. ಅಧ್ಯಾತ್ಮ ಕೇಂದ್ರ, ಪಾಠಶಾಲೆ, ಗ್ರಂಥಾಲಯ, ಶಾಂತಿಸಾಗರ ಅವರ ಜೀವನ ಚರಿತ್ರೆ ಸಾರುವ ಚಿತ್ರಲೋಕ (ಮ್ಯೂಸಿಯಂ), ಶಾಂತಿಸಾಗರ ಮುನಿಯ ಕಂಚಿನ ಪ್ರತಿಮೆ ಅನಾವರಣ, ದಿಗಂಬರ ಜೈನ ಬೋರ್ಡಿಂಗ್‌ ಸಂಸ್ಥಾಪಕರ ಫೋಟೊ ಗ್ಯಾಲರಿ ಹಾಗೂ ಕಾರ್ಯಾಲಯದ ಮಹಡಿ ಉದ್ಘಾಟನೆಯೂ ನೆರವೇರಲಿದೆ.

‘ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಚಾರ್ತುಮಾಸ ಆಚರಿಸುತ್ತಿರುವ ವರ್ಧಮಾನ ಸಾಗರಜಿ ಮುನಿ ಅವರ ಸಂಘದಲ್ಲಿ 8 ಜನ ತ್ಯಾಗಿಗಳು ಯಮಸಲ್ಲೇಖನ ವ್ರತಾಚರಣೆ ಮೂಲಕ ಸಮಾಧಿಮರಣ ಹೊಂದಿದ್ದಾರೆ. ಆ ತ್ಯಾಗಿಗಳ ನೆನಪಿನಲ್ಲಿ ಸಮಾಧಿಸ್ಮೃತಿ ಎಂದು 21 ಅಡಿ ಎತ್ತರದ ಸ್ಮಾರಕ ನಿರ್ಮಿಸಲಾಗಿದೆ. ಇದರ ಉದ್ಘಾಟನೆಯೂ ನಡೆಯಲಿದೆ. ಇದು ದೇಶದ ದೊಡ್ಡ ಸ್ಮಾರಕ ಎಂದು ಗುರುತಿಸಿಕೊಳ್ಳಲಿದೆ’ ಎಂದು ಬೋರ್ಡಿಂಗ್‌ನ ಪ್ರಕಟಣೆ ತಿಳಿಸಿದೆ.

ADVERTISEMENT

ಮೂಡಬಿದರೆಯ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ, ಎನ್.ಆರ್. ಪುರ ಕ್ಷೇತ್ರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಅಭಯ ಪಾಟೀಲ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಉದ್ಯಮಿ ಅಶೋಕ ಪಟನಿ, ರಾಜೇಂದ್ರ ಕಟಾರಿಯಾ, ಜಮನಲಾಲ ಹಪಾವತ, ತೀರ್ಥಕ್ಷೇತ್ರ ಸಂರಕ್ಷಣಾ ಸಮಿತಿ ಅಧ್ಯಕ್ಷ ಪ್ರಭಾತ ಜೈನ, ಅನಿಲ ಸೇಠಿ, ಪ್ರಕಾಶ ಬಡಜೇತಿಯಾ, ಸುಭಾಷ ಜೈನ, ಸುರೇಶ ಪಾಟೀಲ, ಡಿ,.ಆರ್. ಶಹಾ, ಕರ್ನಾಟಕ ಜೈನ ಸಂಘದ ಅಧ್ಯಕ್ಷ ಬಿ. ಪ್ರಸನ್ನಯ್ಯ, ಭರತೇಶ ಶಿಕ್ಷಣ ಸಂಸ್ಥೆಯ ರಾಜೀವ ದೊಡ್ಡಣ್ಣವರ ಪಾಲ್ಗೊಳ್ಳಲಿದ್ದಾರೆ.

‘ಆಚಾರ್ಯ ವರ್ಧಮಾನ ಸಾಗರ ಮುನಿ ಮತ್ತವರ ಸಂಘವು ರಾಜಸ್ಥಾನದ ಮಹಾವೀರಜಿ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಲಿದೆ. ಅವರ ವಿಹಾರ ಮತ್ತು ಬೀಳ್ಕೊಡುಗೆ ಕಾರ್ಯಕ್ರಮವನ್ನು ಮಾರ್ಚ್‌ 5ರಂದು ಮಧ್ಯಾಹ್ನ 3ಕ್ಕೆ ಹಮ್ಮಿಕೊಳ್ಳಲಾಗಿದೆ. ಸಮಾಜದವರು ಭಾಗವಹಿಸಬೇಕು ಎಂದು ಆಯೋಜಕರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.