ADVERTISEMENT

ಜನರು ಜಯದ ಪ್ರಮಾಣಪತ್ರ ನನಗೆ ಕೊಟ್ಟಿದ್ದಾರೆ: ಸತೀಶ

ಮುಂದಿನ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿ: ಸತೀಶ

​ಪ್ರಜಾವಾಣಿ ವಾರ್ತೆ
Published 4 ಮೇ 2021, 10:40 IST
Last Updated 4 ಮೇ 2021, 10:40 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಚುನಾವಣಾ ಆಯೋಗವು ಗೆದ್ದಿರುವ ‍ಪ್ರಮಾಣಪತ್ರ ನೀಡಿರಬಹುದು. ಆದರೆ, ನನಗೆ ಜನರು ಗೆಲುವಿನ ಪ್ರಮಾಣಪತ್ರ ಕೊಟ್ಟಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

‘ಈ ಉಪ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆ ಇತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲನ್ನೂ ಸ್ವೀಕರಿಸಿದ್ದೇವೆ. ಆದರೆ, ಫಲಿತಾಂಶದಿಂದ ಪಕ್ಷ ಹಾಗೂ ವೈಯಕ್ತಿಕವಾಗಿ ಲಾಭವಾಗಿದೆ. ಸಂಘಟನೆ ಮತ್ತು ಮುಂದಿನ ಚುನಾವಣೆ ಹಿನ್ನೆಲೆಯಲ್ಲೂ ಆಶಾದಾಯಕ ಫಲಿತಾಂಶ ಇದಾಗಿದೆ. ಸೋತರೂ ಗೆದ್ದಿದ್ದೇವೆ. ರಾಜಕೀಯ ಲೆಕ್ಕಾಚಾರದಲ್ಲಿ ಮುಂದಿದ್ದೇವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

‘ಕಾರ್ಯಕರ್ತರು, ನಾಯಕರು, ಶಾಸಕರು ಹಾಗೂ ಮಾಜಿ ಶಾಸಕರು ಪಕ್ಷಕ್ಕಾಗಿ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸ್ವಯಂಪ್ರೇರಿತವಾಗಿ ಬಹಳ ಮಂದಿ ಬಂದು ಪ್ರಚಾರ ಮಾಡಿದ್ದು ವಿಶೇಷ’ ಎಂದು ಹೇಳಿದರು.

ADVERTISEMENT

₹ 200 ಹಂಚಿದರು:

‘ನಮ್ಮ ಜನರು ನನ್ನನ್ನು ಗೆಲುವಿನ ದಡ ಸೇರಿಸಿದ್ದಾರೆ. ತೀವ್ರ ಪೈಪೋಟಿ ನೀಡಿದ್ದೇವೆ. ನಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಿದ್ದೇನೆ. ಗೆಲುವಿನ ಅಂತರವನ್ನು ಕಡಿಮೆ ಮಾಡಿದ್ದೇವೆ. ತಾಂತ್ರಿಕವಾಗಿ ಸೋತಿದ್ದೇವೆ ಅಷ್ಟೆ. ಇಡೀ ರಾಜ್ಯದ ಜನರ ಗಮನಸೆಳೆದಿದ್ದೇವೆ. ಆಡಳಿತ ವಿರೋಧಿ ಅಲೆ ಇದೆ ಎನ್ನುವ ಸಂದೇಶ ಇಡೀ ರಾಜ್ಯಕ್ಕೆ ಹೋಗಿದೆ’ ಎಂದರು.

‘ಗೋಕಾಕ ರಾಜಕಾರಣವೇ ಬೇರೆ. ಅಲ್ಲಿ ನಮಗೆ ಬರಬೇಕಾದಷ್ಟು ಮತ ಬಂದಿದೆ. ಅಲ್ಲಿ ₹ 200 ಹಂಚಿದರು. ಅದು ನಮ್ಮನ್ನು ಸೋಲಿಸಿದೆ. ನಮ್ಮವರು ಮತದಾನಕ್ಕೆ ಬಾರದಂತೆ ನೋಡಿಕೊಂಡರು. ಬೆಳಗಾವಿ ದಕ್ಷಿಣ ಹಾಗೂ ಗ್ರಾಮೀಣ ಕ್ಷೇತ್ರದಲ್ಲೂ ನಾವು ಸುಧಾರಿಸಿದ್ದೇವೆ. ನಮ್ಮವರೆಲ್ಲರೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ನಾನು ಹಣ ಹಂಚಿ ಎಂದಿಗೂ ಚುನಾವಣೆ ಮಾಡುವುದಿಲ್ಲ’ ಎಂದು ಹೇಳಿದರು.

‘ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಸ್ಥಳೀಯರನ್ನು ನೇಮಿಸುವುದು ಒಳ್ಳೆಯದು. ಅವರಿಗೆ ಸ್ಥಳೀಯ ಸಮಸ್ಯೆಗಳು ಗೊತ್ತಿರುತ್ತವೆ. ಕೂಡಲೇ ಪರಿಹಾರ ಮಾಡಲು ಅನುಕೂಲ ಆಗುತ್ತದೆ’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ವೀರಕುಮಾರ ಪಾಟೀಲ, ಕಾಕಾಸಾಹೇಬ, ಕಿಸಾನ್ ಘಟಕದ ಸಂಚಾಲಕ ರಾಜೇಂದ್ರ ಪಾಟೀಲ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಗೋವಾ ಎಐಸಿಸಿ ವೀಕ್ಷಕ ಸುನೀಲ ಹನುಮಣ್ಣವರ ಇದ್ದರು.

***

‘ಎಂಇಎಸ್ ಬೆಳೆಯಲು ಬಿಜೆಪಿ ಕಾರಣ’

‘ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಮ್ಮ ಮತಗಳು ಎಂಇಎಸ್‌ ಬೆಂಬಲಿತ ಅಭ್ಯರ್ಥಿ ಪಾಲಾಗಿವೆ. ಇಲ್ಲಿ ಎಂಇಎಸ್‌ ಬೆಳೆಯುವುದಕ್ಕೆ ಬಿಜೆಪಿಯವರೇ ಕಾರಣ. ಈ ಸರ್ಕಾರ ಬಂದ ಮೇಲೆ ಅವರ ಮೇಲೆ ಅನಗತ್ಯವಾಗಿ 30 ಪ್ರಕರಣಗಳನ್ನು ದಾಖಲಿಸಲಾಗಿದೆ. ನಾವು ಆ ಕೆಲಸ ಮಾಡುವಂತೆ ಹೇಳಿದ್ದೆವಾ?‍’ ಎಂದು ಸತೀಶ ಕೇಳಿದರು.

‘ಪ್ರಕರಣಗಳನ್ನು ದಾಖಲಿಸಿದ್ದನ್ನು ಖಂಡಿಸಿ ಅವರು ಬಿಜೆಪಿಗೆ ಬೆಂಬಲ ನೀಡಿಲ್ಲ. ಹೀಗಿರುವಾಗ, ನಾವು ಮತ ವಿಭಜನೆ ಮಾಡುವ ಪ್ರಶ್ನೆಯೇ ಬರುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

***

ಕೋವಿಡ್ ನಿರ್ವಹಣೆ ವಿಷಯದಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ಎಲ್ಲ ಕಡೆಯೂ ರೆಮ್‌ಡಿಸಿವಿರ್‌ ಕೊರತೆ ಕಂಡುಬರುತ್ತಿದೆ. ಜನ ಸಾಮಾನ್ಯರಿಗೆ ಹಾಸಿಗೆಗಳು ಸಿಗದೆ ಪರದಾಡುತ್ತಿದ್ದಾರೆ. ಸರ್ಕಾರ ಏನು ಮಾಡುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ
ಸತೀಶ ಜಾರಕಿಹೊಳಿ, ಕಾರ್ಯಾಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.