ADVERTISEMENT

ಸಮ್ಮಿಶ್ರ ಸರ್ಕಾರ ಉಳಿಯಬೇಕಾದರೆ ಸಿದ್ದರಾಮಯ್ಯರನ್ನು ನಿಮ್ಹಾನ್ಸ್‌ಗೆ ಸೇರಿಸಿ-ಶೋಭಾ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 12:51 IST
Last Updated 21 ಏಪ್ರಿಲ್ 2019, 12:51 IST
   

ಬೆಳಗಾವಿ: ‘ಕಾಂಗ್ರೆಸ್‌ ಶಾಸಕಾಂಗ ‍ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬುದ್ಧಿಭ್ರಮಣೆಯಾಗಿದೆ. ಚುನಾವಣೆ ಘೋಷಣೆಯಾದ ಮೇಲೆ ಏನೇನು ಮಾತನಾಡುತ್ತಾರೆ, ಯಾಕೆ ಮಾತನಾಡುತ್ತಿದ್ದಾರೆ ಎನ್ನುವುದು ಅವರಿಗೇ ಗೊತ್ತಾಗುತ್ತಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಅವರನ್ನು ನಿಮ್ಹಾನ್ಸ್‌ಗೆ ಸೇರಿಸಿದರೆ ಸಮ್ಮಿಶ್ರ ಸರ್ಕಾರ ಉಳಿಯುತ್ತದೆ. ಇಲ್ಲವಾದರೆ ಸರ್ಕಾರಕ್ಕೆ ಕುತ್ತು ತರುವ ಕೆಲಸವನ್ನು ಅವರು ಮಾಡುತ್ತಾರೆ’ ಎಂದು ಸಂಸದೆ, ಬಿಜೆಪಿಯ ಶೋಭಾ ಕರಂದ್ಲಾಜೆ ಟೀಕಿಸಿದರು.

ಚಿಕ್ಕೋಡಿಯಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ರೋಡ್‌ ಶೋ ನಡೆಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಅವರು ಕನಸು ಕಾಣುತ್ತಿದ್ದಾರೆ. ಸರ್ಕಾರ ಉಳಿಸಿಯಾದರೂ ಸರಿಯೇ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿಯಾದರೂ ಪರವಾಗಿಲ್ಲ, ಒಟ್ಟಿನಲ್ಲಿ ಮುಖ್ಯಮಂತ್ರಿಯಾಗಲು ಹವಣಿಸುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ನನಗೆ ಬೇಡವಾದ ವ್ಯಕ್ತಿ ಜಿ. ಪರಮೇಶ್ವರ ಉಪಮುಖ್ಯಮಂತ್ರಿಯಾಗಿ ಮೆರೆಯುತ್ತಿದ್ದಾರೆ. ಹೀಗಾಗಿ, ಈ ಸರ್ಕಾರ ಉಳಿಯಬಾರದು ಎಂದು ಹೇಳಿಕೆಗಳನ್ನು ಕೊಟ್ಟು ಗೊಂದಲ ಮೂಡಿಸುತ್ತಿದ್ದಾರೆ’ ಎಂದರು.

‘ಮುಖ್ಯಮಂತ್ರಿಯಾಗಿದ್ದಾಗ ಜಾತಿ–ಜಾತಿ ಒಡೆಯುವ ಪ್ರಯತ್ನ ಮಾಡಿದರು. ಟಿಪ್ಪು ಸುಲ್ತಾನ್‌ ಜಯಂತಿ ಮಾಡಿ, ಇನ್ನೊಂದು ಧರ್ಮವನ್ನು ಹಿಂದೂ ಧರ್ಮದ ಮೇಲೆ ಎತ್ತಿ ಕಟ್ಟುವ ಪ್ರಯತ್ನ ಮಾಡಿದರು. ಕುಟ್ಟಪ್ಪನಂಥವರನ್ನು ಕೊಂದಂತಹ ಕೊಲೆಗಾರ. ಅವರಿಂದ ಪ್ರಧಾನಿ ನರೇಂದ್ರ ಮೋದಿ ಕಲಿಯಬೇಕಾದುದೇನಿಲ್ಲ’ ಎಂದು ತಿರುಗೇಟು ನೀಡಿದರು.

‘ಅಭಿವೃದ್ಧಿ ಕೆಲಸ ಮಾಡದೇ ಧರ್ಮ–ಧರ್ಮ, ಜಾತಿ–ಜಾತಿಗಳನ್ನು ಒಡೆದು, ವೀರಶೈವ–ಲಿಂಗಾಯತರನ್ನು ವಿಭಜಿಸಿ ಅಧಿಕಾರಕ್ಕೆ ಬರಬಹುದು ಎನ್ನುವ ಭ್ರಮೆಯಲ್ಲಿದ್ದರು. ಭ್ರಮನಿರಸನರಾಗಿರುವುದರಿಂದ ಹುಚ್ಚುತನದ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಅವರಿಗೆ ಗೌರವ ಬರುವುದಿಲ್ಲ. ರಾಜ್ಯಕ್ಕೆ, ಕನ್ನಡಿಗರಿಗೆ ಗೌರವ ಬರುವುದಿಲ್ಲ. ಕಾಂಗ್ರೆಸ್‌ನವರು ಅವರ ಪಕ್ಷ ಉಳಿಸಿಕೊಳ್ಳಬೇಕಾದರೆ, ಸಿದ್ದರಾಮಯ್ಯ ಅವರನ್ನು ನಿಮ್ಹಾನ್ಸ್‌ಗೆ ಸೇರಿಸಲಿ’ ಎಂದರು.

‘ಬಿಜೆಪಿ ಪರವಾಗಿ ರಮೇಶ ಜಾರಕಿಹೊಳಿ ಪ್ರಚಾರ ಮಾಡುತ್ತಿರುವುದು, ಬೆಂಬಲಿಗರಿಗೂ ತಿಳಿಸಿರುವುದು ಸಂತಸ ಉಂಟು ಮಾಡಿದೆ. ನಮಗೆ ಯಾರೇ ಬೆಂಬಲ ನೀಡಿದರೂ ಖುಷಿಯಾಗುತ್ತದೆ’ ಎಂದು ಅಣ್ಣಾಸಾಹೇಬ ಜೊಲ್ಲೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.