ಬೆಳಗಾವಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿ ಸೌಕರ್ಯದ ನೆರವಿನಿಂದ ಸ್ಥಳೀಯವಾಗಿ ಕಿರು ಆಹಾರ ಸಂಸ್ಕರಣಾ ಉದ್ಯಮ ಸ್ಥಾಪಿಸಿ, ಆರ್ಥಿಕವಾಗಿ ಸಬಲರಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.
ಇಲ್ಲಿನ ಶಿವಬಸವ ನಗರದ ಕೆಪಿಟಿಸಿಎಲ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ(ಪಿಎಂಎಫ್‌ಎಂಇ) ಯೋಜನೆ ಕುರಿತು ಜಿಲ್ಲಾಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕಿರು ಆಹಾರ ಸಂಸ್ಕರಣಾ ಉದ್ಯಮಗಳ ಸ್ಥಾಪನೆಗಾಗಿ ಕೇಂದ್ರ ಸರ್ಕಾರದಿಂದ ₹9 ಲಕ್ಷ, ರಾಜ್ಯದಿಂದ ₹5 ಲಕ್ಷ ಸೇರಿದಂತೆ ₹15 ಲಕ್ಷದವರೆಗೆ ಸಬ್ಸಿಡಿ ನೀಡಲಾಗುತ್ತಿದೆ. ಇದರೊಂದಿಗೆ ತಾವೂ ಬ್ಯಾಂಕ್‌ಗಳಿಂದ ಒಂದಿಷ್ಟು ಸಾಲ ಸೌಲಭ್ಯ ಪಡೆದು ಉದ್ಯಮಗಳನ್ನು ಸ್ಥಾಪಿಸಬೇಕು. ಜೀವನದಲ್ಲಿ ತಾವು ಕಲಿತಿರುವ ಕೌಶಲ ಪ್ರಯೋಗ ರೂಪಕ್ಕಿಳಿಸಲು ಇದು ಒಳ್ಳೆಯ ಅವಕಾಶ’ ಎಂದರು.
‘ಇಂದು ದೊಡ್ಡ ಉದ್ಯಮಿಗಳಾದವರೆಲ್ಲ ಆರಂಭದಲ್ಲಿ ಕಿರು ಉದ್ಯಮಗಳನ್ನು ಮಾಡುತ್ತ ಬೆಳೆದವರೇ. ಅವರನ್ನು ನೀವು ಪ್ರೇರಣೆಯಾಗಿ ಇಟ್ಟುಕೊಂಡು ನೀವೂ ಮುನ್ನಡೆಯಬೇಕು. ಮನೆಯಲ್ಲೇ ನಿಮ್ಮದೇ ಉತ್ಪನ್ನ ಸಿದ್ಧಪಡಿಸಿ ಬ್ರ್ಯಾಂಡಿಂಗ್ ಮಾಡಿ, ಮಾರುಕಟ್ಟೆಗೆ ತರಬೇಕು. ಈ ಯೋಜನೆಯಡಿ ಹಿಟ್ಟಿನ ಗಿರಣಿ ತೆರೆಯಬಹುದು. ಬೇಕರಿ ಉತ್ಪನ್ನಗಳು, ಮಸಾಲೆ ಪದಾರ್ಥಗಳು, ಚಪ್ಪಾತಿ ಸಿದ್ಧಪಡಿಸಬಹುದು. ಜೇನು ಸಂಸ್ಕರಣೆ ಮಾಡಬಹುದು’ ಎಂದು ತಿಳಿಸಿದರು.
‘ಆಹಾರ ಉದ್ಯಮದಲ್ಲಿ ನಾವು ಅಗ್ರಸ್ಥಾನಕ್ಕೆ ಏರುವ ಅವಶ್ಯಕತೆ ಇದೆ. ಯಾರು ಗುಣಮಟ್ಟಕ್ಕೆ ಆದ್ಯತೆ ನೀಡುತ್ತಾರೆಯೋ ಮತ್ತು ಗ್ರಾಹಕರ ವಿಶ್ವಾಸ ಗಳಿಸುತ್ತಾರೆಯೋ, ಅವರು ಉದ್ಯಮ ರಂಗದಲ್ಲಿ ಬೆಳೆಯಲು ಸಾಧ್ಯವಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ವಾರ್ಷಿಕ 1,500 ಜನರಿಗೆ ಕಿರು ಉದ್ಯಮ ಸ್ಥಾಪಿಸಲು ಅವಕಾಶವಿದೆ’ ಎಂದರು.
ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ(ಕೆಪೆಕ್) ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ಶಿವಪ್ರಕಾಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಉಪಸ್ಥಿತರಿದ್ದರು. ಕೃಷಿ ಇಲಾಖೆ ಜಂಟಿನಿರ್ದೇಶಕ ಎಚ್.ಡಿ.ಕೋಳೇಕರ ಸ್ವಾಗತಿಸಿದರು.
ಇದೇವೇಳೆ, ಪಿಎಂಎಫ್‌ಎಂಇ ಯೋಜನೆಯಡಿ ಸಿದ್ಧಪಡಿಸಿದ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಬ್ಯಾಂಕ್‌ಗಳಲ್ಲಿ ಲಭ್ಯವಿರುವ ಸಾಲ ಸೌಲಭ್ಯ, ದಾಖಲೆಗಳ ಕುರಿತು ಮಾಹಿತಿ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.