ADVERTISEMENT

ಬೆಳಗಾವಿ | ಬಾಲಕಿ ಮೇಲೆ ಅತ್ಯಾಚಾರ: ಮೇಕಳಿ‌ಯ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಮೇ 2025, 9:04 IST
Last Updated 24 ಮೇ 2025, 9:04 IST
<div class="paragraphs"><p>ಲೋಕೇಶ್ವರ ಸ್ವಾಮೀಜಿ </p></div>

ಲೋಕೇಶ್ವರ ಸ್ವಾಮೀಜಿ

   

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮೇಕಳಿ‌ ಗ್ರಾಮದ ರಾಮಲಿಂಗ ಮಠದ ಹಠಯೋಗಿ ಲೋಕೇಶ್ವರ ಸ್ವಾಮೀಜಿ ಅವರನ್ನು ‘ಪೋಕ್ಸೊ’ ಹಾಗೂ ಅಪಹರಣ ಪ್ರಕರಣದಡಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಪ್ರಥಮ ಪಿಯು ಓದುತ್ತಿರುವ ವಿದ್ಯಾರ್ಥಿನಿಯನ್ನು ಮೇ 13ರಂದು ಅಪಹರಿಸಿಕೊಂಡು ಹೋಗಿ ನಿರಂತರ ಮೂರು ದಿನ ಅತ್ಯಾಚಾರ ಎಸಗಿದ ಆರೋಪಿ ಎದುರಿಸುತ್ತಿದ್ದಾರೆ. 17.9 ವರ್ಷದ ಸಂತ್ರಸ್ತೆ ಖುದ್ದು ದೂರು ದಾಖಲಿಸಿದ್ದಾರೆ. ಮೇ 21ರಂದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

ADVERTISEMENT

ಮೂಲತಃ ಕಲಬುರಗಿ ಜಿಲ್ಲೆಯವರಾದ ಲೋಕೇಶ್ವರ, ಕೆಲವು ವರ್ಷಗಳಿಂದ ಮೇಕಳಿಯಲ್ಲಿ ಮಠ ಕಟ್ಟಿಕೊಂಡು ‘ಹಠಯೋಗಿ ಲೋಕೇಶ್ವರ ಸ್ವಾಮೀಜಿ’ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದರು.

ಘಟನೆ ವಿವರ: ‘ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ನಾನು ಹಾಗೂ ನಮ್ಮ ತಂದೆ ಮಠಕ್ಕೆ ಬರುತ್ತಿದ್ದೆವು. ನಂಬಿಕೆಯಿಂದ ಸ್ವಾಮೀಜಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದೆವು. ಮೇ 13ರಂದು ನಮ್ಮ ಸೋದರ ಮಾವನ ಊರಿಗೆ ಹೋಗಿ ಮರಳಿ ಬರುತ್ತಿದ್ದೆ. ನಮ್ಮೂರು ಪಕ್ಕದಲ್ಲೇ ಇರುವ ಕಾರಣ ನಡೆದುಕೊಂಡು ಬರುತ್ತಿದ್ದರು. ಮಾರ್ಗಮಧ್ಯೆ ನೋಡಿದ ಸ್ವಾಮೀಜಿ, ಮನೆಗೆ ಬಿಡುವುದಾಗಿ ಹೇಳಿ ಕಾರಿನಲ್ಲಿ ಹತ್ತಿಸಿಕೊಂಡಿದ್ದರು. ಆದರೆ, ನಮ್ಮ ಮನೆಯ ಮುಂದೆ ಇಳಿಸದೇ ಬೆದರಿಕೆ ಹಾಕಿ ನನ್ನನ್ನು ರಾಯಚುರು ಕಡೆಗೆ ಕರೆದುಕೊಂಡು ಹೋದರು’ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

‘ರಾಯಚೂರಿನಲ್ಲಿ ಮೇ 13 ಹಾಗೂ 14ರಂದು ಲಾಡ್ಜ್‌ವೊಂದರಲ್ಲಿ ಉಳಿಸಿಕೊಂಡರು. ನಾನು ಬೇಡವೆಂದರೂ ಒತ್ತಾಯಪೂರ್ವಕವಾಗಿ ಅತ್ಯಾಚಾರ ಎಸಗಿದರು. ಮಾರನೇ ದಿನ (ಮೇ 15) ಬಾಗಲಕೋಟೆಗೆ ಕರೆದುಕೊಂಡು ಬಂದು, ಅಲ್ಲಿನ ಲಾಡ್ಜ್‌ವೊಂದರಲ್ಲಿ ಇಡೀ ದಿನ ಪದೇಪದೇ ಅತ್ಯಾಚಾರ ಎಸಗಿದರು. ಮೇ 16ರಂದು ನಾನು ಮನೆಗೆ ಹೋಗಬೇಕು ಎಂದು ತೀವ್ರ ಅಳಲು ಶುರು ಮಾಡಿದೆ. ಮಹಾಲಿಂಗಪುರ ಪಟ್ಟಣಕ್ಕೆ ಕರೆತಂದು ಬಸ್‌ ನಿಲ್ದಾಣದಲ್ಲಿ ಬಿಟ್ಟು ಹೋದರು. ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು. ನಾನು ಹೆದರಿಕೆಯಿಂದ ಸುಮ್ಮನೆ ಇದ್ದೆ. ತಡವಾಗಿ ನಮ್ಮ ತಂದೆಯ ಬಳಿ ಸ್ವಾಮೀಜಿ ಕ್ರೌರ್ಯವನ್ನು ತಿಳಿಸಿದೆ’ ಎಂದು ದೂರಿನಲ್ಲಿ ಬರೆದಿದ್ದಾರೆ.

‘ಮೇ 21ರಂದು ಬಾಲಕಿ ತನ್ನ ಪಾಲಕರೊಂದಿಗೆ ಬಾಗಲಕೋಟೆಯ ಮಹಿಳಾ ಠಾಣೆಗೆ ದೂರು ನೀಡಿದ್ದರು. ಅಲ್ಲಿಂದ ಮೂಡಲಗಿ ಠಾಣೆಗೆ ಪ್ರಕರಣ ವರ್ಗಾವಣೆಯಾಗಿತ್ತು. ಮೂಡಲಗಿ ಪೊಲೀಸರು ಪ್ರತ್ಯೇಕ ಮತ್ತೊಂದು ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದರು. ವಿಚಾರಣೆ ವೇಳೆ ಆರೋಪಿ ತಪ್ಪು ಒಪ್ಪಿಕೊಂಡಿದ್ದು, ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ’ ಎಂದು ಎಸ್ಪಿ ತಿಳಿಸಿದರು.

ಮಠದಲ್ಲಿ ಮಾರಕಾಸ್ತ್ರ ಸಂಗ್ರಹ: ಗ್ರಾಮಸ್ಥರ ಆರೋಪ

‘ಮೇಕಳಿಯ ರಾಮಲಿಂಗ ಮಠದಲ್ಲಿ ಸ್ವಾಮಿ ಮಚ್ಚು, ಲಾಂಗ್‌, ಚಾಕುಗಳನ್ನು ಇಟ್ಟುಕೊಂಡಿದ್ದ. ಜನರನ್ನು ಹೆದರಿಸಿ ಅನೈತಿಕ ಚಟುವಟಿಕೆ ನಡೆಸುತ್ತಿದ್ದ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು’ ಎಂದು ಗ್ರಾಮದ ಜನ ಆಗ್ರಹಿಸಿದ್ದಾರೆ.

‘2019ರಲ್ಲಿ ಈ ಸ್ವಾಮಿ ಊರಿಗೆ ಬಂದು ಮಠ ಕಟ್ಟಿದ್ದಾನೆ. ಇದೇ ರೀತಿ ಬೇರೆಬೇರೆ ಊರುಗಳಲ್ಲೂ ಹಲವು ಮಠಗಳಿವೆ. ಮಾಟ– ಮಂತ್ರ ಮಾಡುವುದು, ದೇವರ ಹೇಳಿಕೆ ನೀಡುವುದು, ಮಟಕಾ ನಂಬರ್‌ ಬರೆದುಕೊಡುವುದು ಇಂಥ ಹಲವು ಅನೈತಿಕ ಕೃತ್ಯಗಳನ್ನು ಮಾಡುತ್ತಿದ್ದ. ಇದನ್ನು ಗಮನಿಸಿ 2021ರಲ್ಲಿ ಗ್ರಾಮಸ್ಥರು ಹೋರಾಟ ಮಾಡಿದ್ದೇವು. ಪೊಲೀಸರು ತಿಳಿವಳಿಕೆ ಹೇಳಿ ಕಳಿಸಿದ್ದರು. ಆದರೂ ಸ್ವಾಮಿ ತನ್ನ ಕೆಟ್ಟ ಚಟ ಬಿಟ್ಟಿಲ್ಲ’ ಎಂದು ಶಂಕರಯ್ಯ ಹಿರೇಮಠ ದೂರಿದ್ದಾರೆ.

‘ಈ ಸ್ವಾಮಿಗೆ ಮಹಿಳಾ ಭಕ್ತರೇ ಹೆಚ್ಚಿದ್ದಾರೆ. ಅದರಲ್ಲೂ ಮಹಾರಾಷ್ಟ್ರದಿಂದಲೇ ಮುಗ್ದ ಜನ ಬರುತ್ತಾರೆ. ಪುರುಷರಿಗೆ ಪ್ರವೇಶವೇ ಇಲ್ಲ. ಎಷ್ಟೋ ಸಾರಿ ಭಕ್ತರನ್ನು ಮಠದಲ್ಲೇ ಉಳಿಸಿಕೊಳ್ಳುತ್ತಿದ್ದ. ಇದೆಲ್ಲವೂ ಅನುಮಾನ ಬಂದು ಈ ಹಿಂದೆಯೇ ದೂರು ನೀಡಿದ್ದೇವೆ’ ಎಂದು ಕೆಂಚಪ್ಪ ಒಡೇರ್‌ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.