ADVERTISEMENT

ಮುಖ್ಯಶಿಕ್ಷಕನ ಮೇಲೆ ಪಿಎಸ್‌ಐ ಅವಾಚ್ಯ ಶಬ್ದ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 15:18 IST
Last Updated 17 ಜೂನ್ 2021, 15:18 IST
ವೀರಣ್ಣ ಮಡಿವಾಳರ
ವೀರಣ್ಣ ಮಡಿವಾಳರ   

ಬೆಳಗಾವಿ: ಕವಿ ಹಾಗೂ ಮುಖ್ಯಶಿಕ್ಷಕರೊಬ್ಬರ ಮೇಲೆ ಜಿಲ್ಲೆಯ ರಾಯಬಾಗ ಠಾಣೆಯ ಪಿಎಸ್‌ಐ ಅವಾಚ್ಯ ಶಬ್ದ ಬಳಸಿದ ಆರೋಪ ಕೇಳಿಬಂದಿದೆ.

ರಾಯಬಾಗ ತಾಲ್ಲೂಕಿನ ನಿಡಗುಂದಿಯ ಅಂಬೇಡ್ಕರ್‌ ನಗರ ಕನ್ನಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ವೀರಣ್ಣ ಮಡಿವಾಳರ ಪಿಎಸ್‌ಐ ನಡೆಯನ್ನು ತೀವ್ರವಾಗಿ ಖಂಡಿಸಿ ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ ಪುಟದಲ್ಲಿ ಬರೆದುಕೊಂಡಿದ್ದಾರೆ.

‘ನಮ್ಮ ಶಾಲೆಗೆ ಬರುತ್ತಿದ್ದ ಕೆಲಸಗಾರರ ದ್ವಿಚಕ್ರವಾಹನವನ್ನು ಪೊಲೀಸರು ತಡೆದಿದ್ದರು. ಶಾಲೆಯ ಕೆಲಸಕ್ಕೆ ಹೋಗುತ್ತಿರುವುದಾಗಿ ವಿನಂತಿಸಿದ್ದಕ್ಕೆ, ಪರವಾನಗಿ ತೋರಿಸಿ ವಾಹನ ಒಯ್ಯಿರಿ ಎಂದು ಸಿಪಿಐ ಹೇಳಿದ್ದರು. ಅದರಂತೆ ನಾವು ದಾಖಲೆಗಳನ್ನು ತೋರಿಸಲು ಹೋದಾಗ ಪಿಎಸ್‌ಐ ಅವಾಚ್ಯ ಶಬ್ದ ಪ್ರಯೋಗಿಸಿದರು. ಶಿಕ್ಷಕನಾದ ನಾನು ಅದಕ್ಕೆ ಅರ್ಹನೇ?’ ಎಂದು ಪೋಸ್ಟ್ ಮಾಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಬಿ.ಆರ್. ರವಿಕಾಂತೇಗೌಡ ಅವರನ್ನು ಟ್ಯಾಗ್ ಮಾಡಿದ್ದಾರೆ.

ADVERTISEMENT

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ಪೊಲೀಸರ ನಡೆಯ ವಿರುದ್ಧ ಅಸಮಾಧಾನ ಹಾಗೂ ಟೀಕೆ ವ್ಯಕ್ತಪಡಿಸಿದ್ದಾರೆ. ಮೈಸೂರಿನ ವಕೀಲ ಪಿ.ಜೆ. ರಾಘವೇಂದ್ರ ಅವರು ವೀರಣ್ಣ ಅವರು ಸರ್ಕಾರಿ ಶಾಲೆ ಅಭಿವೃದ್ಧಿಗೆ ಕೈಗೊಂಡಿರುವ ವರದಿಯನ್ನು ಲಗತ್ತಿಸಿ ಫೇಸ್‌ಬುಕ್‌ನಲ್ಲಿ ಜಿಲ್ಲಾ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ. ಪಿಎಸ್‌ಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಪ್ರತಿಕ್ರಿಯೆಗೆ ಎಸ್ಪಿ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.