ADVERTISEMENT

ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ: ನಿವೃತ್ತ ಆರ್‌ಎಸ್‌ಐ ಎಂ.ಬಿ.ಮುಷ್ಠಗಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 8:26 IST
Last Updated 2 ಏಪ್ರಿಲ್ 2023, 8:26 IST
   

ಬೆಳಗಾವಿ: ‘ಸಮಾಜದಲ್ಲಿ ಪೊಲೀಸ್‌ ಇಲಾಖೆಗೆ ತನ್ನದೇಯಾದ ಗೌರವವಿದೆ. ಹಾಗಾಗಿ ಪೊಲೀಸರು ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ನಿವೃತ್ತ ಆರ್‌ಎಸ್‌ಐ ಎಂ.ಬಿ.ಮುಷ್ಠಗಿ ಹೇಳಿದರು.

ಇಲ್ಲಿನ ಪೊಲೀಸ್‌ ಕವಾಯತು ಮೈದಾನದಲ್ಲಿ ನಗರ ಪೊಲೀಸ್‌ ಕಮಿಷನರೇಟ್‌ ಹಾಗೂ ಜಿಲ್ಲಾ ಪೊಲೀಸ್‌ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೊಲೀಸರಿಗೆ ಯಾವುದೇ ಜಾತಿ, ಧರ್ಮವಿಲ್ಲ. ನಮಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಬೇಕು. ಮೇಲಧಿಕಾರಿಗಳ ಮಾರ್ಗದರ್ಶನದಂತೆ ಪ್ರತಿಯೊಬ್ಬರೂ ಕೆಲಸ ಮಾಡಿ, ಪೊಲೀಸ್‌ ಇಲಾಖೆ ಗೌರವ ಎತ್ತಿ ಹಿಡಿಯಬೇಕು’ ಎಂದು ಕರೆ ನೀಡಿದರು.

ADVERTISEMENT

ನಿವೃತ್ತ ಎಆರ್‌ಎಸ್‌ಐ ಎ.ಎ.ಕಿಲ್ಲೇದಾರ, ‘ವಿವಿಧ ಇಲಾಖೆಗಳಿಗಿಂತ ಪೊಲೀಸ್‌ ಇಲಾಖೆ ಭಿನ್ನ. ಪೊಲೀಸರದ್ದು ನಿತ್ಯವೂ ಸವಾಲಿನ ಕೆಲಸ. ಸಮಾಜದಲ್ಲಿ ಶಾಂತತೆ ಕಾಪಾಡಲು ಶ್ರಮಿಸುತ್ತಿರುವ ಅವರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಸೌಕರ್ಯ ಕಲ್ಪಿಸುತ್ತಿದೆ. ಅವುಗಳ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಉತ್ತರ ವಲಯ ಪೊಲೀಸ್‌ ಮಹಾನಿರೀಕ್ಷಕ ಎನ್‌.ಸತೀಶಕುಮಾರ, ‘ಪೊಲೀಸ್‌ ಇಲಾಖೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕೌಟುಂಬಿಕ ಹಿತ ತ್ಯಾಗ ಮಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸುತ್ತಿದ್ದಾರೆ. ಸೇವೆಯಿಂದ ನಿವೃತ್ತಿ ಹೊಂದಿದ ನೌಕರರನ್ನು ಸದಾ ಗೌರವಿಸಬೇಕು. ಪೊಲೀಸ್‌ ಕಲ್ಯಾಣ ನಿಧಿ ಮೂಲಕವೂ ಅವರಿಗೆ ನೆರವು ಒದಗಿಸಲಾಗುತ್ತಿದೆ’ ಎಂದು ಹೇಳಿದರು.

ನಗರ ಪೊಲೀಸ್‌ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ್‌ ಪಾಟೀಲ ಉಪಸ್ಥಿತರಿದ್ದರು. ಪೊಲೀಸರು ಆಕರ್ಷಕ ಪಥಸಂಚಲನ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.