ADVERTISEMENT

ವಿದೇಶದಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 16:31 IST
Last Updated 15 ಫೆಬ್ರುವರಿ 2021, 16:31 IST
ಬಂಧಿತ ಆರೋಪಿ ಇಮ್ತಿಯಾಜ ಯರಗಟ್ಟಿ
ಬಂಧಿತ ಆರೋಪಿ ಇಮ್ತಿಯಾಜ ಯರಗಟ್ಟಿ   

ಬೆಳಗಾವಿ: ವಿದೇಶಗಳಲ್ಲಿ ನೌಕರಿ ಕೊಡಿಸುವುದಾಗಿ ಪ್ರಚಾರ ಮಾಡಿ ಜನರನ್ನು ನಂಬಿಸಿ ಮೋಸ ಮಾಡಿ ಹಣ ದೋಚುತ್ತಿದ್ದ ಆರೋಪದ ಮೇಲೆ ನಗರದ ದರ್ಬಾರ್‌ ಗಲ್ಲಿ ಮತ್ತು ಶೆಟ್ಟಿ ಗಲ್ಲಿಯ ಎರಡು ಕಚೇರಿಗಳ ಮೇಲೆ ಮಾರ್ಕೆಟ್‌ ಠಾಣೆ ಪೊಲೀಸರು ಸೋಮವಾರ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬರು ಪರಾರಿಯಾಗಿದ್ದಾರೆ.

ಶಾಹೂನಗರದ ನಿವಾಸಿ ಇಮ್ತಿಯಾಜ ಅಸ್ತುಪಟೇಲ ಯರಗಟ್ಟಿ (40) ಬಂಧಿತ. ಉಡುಪಿಯ ಕುಂದಾಪುರದ ಉಮರಫಾರುಕ ಅಬ್ದುಲ ಹಮೀದ (37) ಪರಾರಿಯಾಗಿದ್ದಾರೆ ಎಂದು ‍ಪೊಲೀಸರು ತಿಳಿಸಿದ್ದಾರೆ.

ಒಂದು ಕಚೇರಿಯಲ್ಲಿದ್ದ ಮೂರು ಕಂಪ್ಯೂಟರ್, ಲ್ಯಾಪ್‌ಟಾಪ್, 100 ಭಿತ್ತಿಪತ್ರ, 15 ವಿಸಿಟಿಂಗ್ ಕಾರ್ಡ್, 1 ಬೋರ್ಡ್, 1 ಪ್ಲೆಕ್ಸ್, 1 ಫಾಲೋಅಪ್ ಶೀಟ್, ನಗರಪಾಲಿಕೆಯಿಂದ ಪಡೆದ ಪರವಾನಗಿ ಪತ್ರ, 5 ಲೆಟರ್ ಪ್ಯಾಡ್, ₹ 1.13 ಲಕ್ಷ, ಮೊಬೈಲ್ ಫೋನ್, ದ್ವಿಚಕ್ರವಾಹನ, ಬಾಂಡ್, ಮೆಡಿಕಲ್ ಪೇಪರ್‌ಗಳು ಮತ್ತು 314 ಪಾಸ್‌ಪೋರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ADVERTISEMENT

ಇನ್ನೊಂದರಲ್ಲಿದ್ದ 2 ಕಂಪ್ಯೂಟರ್, 2 ಮೊಬೈಲ್ ಫೋನ್‌ಗಳು, 20 ಆಧಾರ್‌ ಚೀಟಿಗಳು, 15 ‌ವಿಸಿಟಿಂಗ್ ಕಾರ್ಡ್‌, ಬೋರ್ಡ್, 2 ಮುದ್ರೆಗಳು, ಗುರುತಿನ ಚೀಟಿ, ಅರ್ಜಿಗಳು, 13 ಡೈರಿ, ಲೀಸ್ ಅಗ್ರಿಮೆಂಟ್, ಪಾಸ್‌ಪೋರ್ಟ್‌ ಜಪ್ತಿ ಮಾಡಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಡಿಸಿಪಿ ವಿಕ್ರಂ ಅಮಟೆ ಮಾಹಿತಿ ನೀಡಿದ್ದಾರೆ.

ರೌಡಿಶೀಟರ್‌ಗಳ ಪರೇಡ್

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಲಿರುವ ಹಿನ್ನೆಲೆಯಲ್ಲಿ ಖಡೇಬಜಾರ್ ಠಾಣೆ ಪೊಲೀಸರು ನಗರ ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್, ಡಿಸಿಪಿ ವಿಕ್ರಮ ಅಮಟೆ ನೇತೃತ್ವದಲ್ಲಿ ಸೋಮವಾರ ರೌಡಿ ಶೀಟರ್‌ಗಳ ಪರೇಡ್ ನಡೆಯಿತು.

‘ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿ, ಮುಚ್ಚಳಿಕೆ ಬರೆಸಿಕೊಂಡರು.

30 ಮಂದಿ ರೌಡಿಶೀಟರ್‌ಗಳು ಪಾಲ್ಗೊಂಡಿದ್ದರು.

ಇನ್‌ಸ್ಪೆಕ್ಟರ್‌ ಧೀರಜ್ ಶಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.