ಬೆಳಗಾವಿ: ಜಿಲ್ಲೆಯಲ್ಲಿ ಸರ್ಕಾರಿ ವಲಯದಲ್ಲಿ ಬೇಡಿಕೆಗೆ ತಕ್ಕಷ್ಟು ಆರೋಗ್ಯ ಸೌಕರ್ಯ ಲಭ್ಯವಿಲ್ಲ. ಇದರಿಂದ ಸಾರ್ವಜನಿಕರು ಅದರಲ್ಲೂ ಗ್ರಾಮೀಣ ಭಾಗದವರು ಪರದಾಡುತ್ತಿದ್ದು, ಸಕಾಲಕ್ಕೆ ಚಿಕಿತ್ಸೆ ಲಭ್ಯವಾಗದೆ ಸಾವು–ನೋವು ಸಂಭವಿಸುತ್ತಿವೆ.
ಕೆಲವು ಜಿಲ್ಲೆಗಳಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ, ಹೆಚ್ಚಿನ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಜನಸಂಖ್ಯೆ ಹೆಚ್ಚಿದ್ದರೂ ಸೌಕರ್ಯದಲ್ಲಿ ಹಿಂದೆಬಿದ್ದಿದೆ. 15 ತಾಲ್ಲೂಕು ಒಳಗೊಂಡ ಜಿಲ್ಲೆಗೆ ಮುಖ್ಯವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ), ಉಪಕೇಂದ್ರಗಳು ಬೇಕಿದೆ.
‘30 ಸಾವಿರ ಜನಸಂಖ್ಯೆ ಇದ್ದರೆ ಪಿಎಚ್‌ಸಿ, 5 ಸಾವಿರ ಜನಸಂಖ್ಯೆ ಹೊಂದಿದ್ದರೆ ಉಪಕೇಂದ್ರ ತೆರೆಯಬಹುದು ಎಂದು ಸರ್ಕಾರಿ ನಿಯಮವಿದೆ. ಅರಣ್ಯ ಮತ್ತು ಗುಡ್ಡಗಾಡು ಪ್ರದೇಶ ಇರುವ ಕಡೆ ಭೌಗೋಳಿಕ ವ್ಯಾಪ್ತಿ ದೊಡ್ಡದಿದ್ದರೂ, ಜನಸಂಖ್ಯೆ ಕಡಿಮೆ ಇರುವ ನೆಪವೊಡ್ಡಿ ಆಸ್ಪತ್ರೆಗಳ ಆರಂಭಕ್ಕೆ ಸರ್ಕಾರ ಮಂಜೂರಾತಿ ನೀಡುತ್ತಿಲ್ಲ. ಕೆಲವೆಡೆ ಜನಸಂಖ್ಯೆ ಹೆಚ್ಚಿದ್ದರೂ, ಮಂಜೂರಾತಿಗೆ ಮನಸ್ಸು ಮಾಡುತ್ತಿಲ್ಲ’ ಎಂದು ಮೂಲಗಳು ಹೇಳುತ್ತವೆ. ಜಿಲ್ಲೆಯಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆ ಬಲಪಡಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ.
ದೂಳು ತಿನ್ನುತ್ತಿವೆ ಪ್ರಸ್ತಾವ: ಜಿಲ್ಲೆಯಲ್ಲಿ 139 ಪಿಎಚ್‌ಸಿ, 616 ಉಪಕೇಂದ್ರ, 12 ನಗರ ಪ್ರಾಥಮಿಕ ಕೇಂದ್ರ, 16 ಸಮುದಾಯ ಆರೋಗ್ಯ ಕೇಂದ್ರಗಳಿವೆ. ‘ಇವು ಸಾಲುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಆಸ್ಪತ್ರೆಗಳ ಸಂಖ್ಯೆ ಹೆಚ್ಚಿಸಬೇಕು’ ಎಂಬ ಜನರ ಬೇಡಿಕೆ ಹಲವು ದಶಕಗಳಿಂದ ಇದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಲವು ವರ್ಷಗಳಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುತ್ತಲೇ ಇದೆ. ಆದರೆ, ಅದಕ್ಕೆ ಸ್ಪಂದನೆ ಸಿಗದೆ ಪ್ರಸ್ತಾವಗಳು ದೂಳು ತಿನ್ನುತ್ತಿವೆ ಎಂಬ ಆರೋಪ ಕೇಳಿಬರುತ್ತಿವೆ.
ಮಾನವ ಸಂಪನ್ಮೂಲದ ಅಭಾವ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಒಂದೆಡೆ ಸರ್ಕಾರಿ ಆಸ್ಪತ್ರೆಗಳಿಲ್ಲ. ಕೆಲವೆಡೆ ಇದ್ದರೂ ಸೇವೆಗೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಲಭ್ಯವಿಲ್ಲ.
ಜಿಲ್ಲೆಯ ಪಿಎಚ್‌ಸಿಗಳಿಗೆ 149 ವೈದ್ಯಾಧಿಕಾರಿ ಹುದ್ದೆ ಮಂಜೂರಾಗಿವೆ. ಈ ಪೈಕಿ 95 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದು, 53 ಹುದ್ದೆ ಖಾಲಿ ಇವೆ.
ಉಪಕೇಂದ್ರಗಳಿಗೆ 472 ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹುದ್ದೆ ಮಂಜೂರಾಗಿದ್ದು, 116 ಮಂದಿಯಷ್ಟೇ ಕೆಲಸ ಮಾಡುತ್ತಿದ್ದಾರೆ. 356 ಹುದ್ದೆ ಖಾಲಿ ಉಳಿದಿವೆ. ಇನ್ನೂ ಮಂಜೂರಾದ 641 ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳ ಪೈಕಿ ಕೆಲಸ ಮಾಡುತ್ತಿರುವುದು 317 ಮಂದಿ ಮಾತ್ರ. 324 ಹುದ್ದೆ ಭರ್ತಿಯಾಗಬೇಕಿದೆ. ಇದಲ್ಲದೆ, ವಿವಿಧ ಹಂತಗಳ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ.
ಮಾನವ ಸಂಪನ್ಮೂಲ ಕೊರತೆ ದೊಡ್ಡ ಪ್ರಮಾಣದಲ್ಲಿ ಇರುವುದರಿಂದ ಮಕ್ಕಳು, ಗರ್ಭಿಣಿಯರಿಗೆ ಲಸಿಕಾಕರಣ, ವಿವಿಧ ಅಭಿಯಾನ ಮತ್ತು ವಿವಿಧ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ.
(ಪೂರಕ ಮಾಹಿತಿ: ಚನ್ನಪ್ಪ ಮಾದರ, ಆನಂದ ಮನ್ನಿಕೇರಿ, ಪ್ರಸನ್ನ ಕುಲಕರ್ಣಿ, ಪ್ರದೀಪ ಮೇಲಿನಮನಿ)
ಯಾರು ಏನಂತಾರೆ?
ಜಿಲ್ಲೆಯಲ್ಲಿ ಅಗತ್ಯವಿರುವ ಕಡೆ ಸರ್ಕಾರಿ ಆಸ್ಪತ್ರೆ ಆರಂಭಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಖಾಲಿ ಇರುವ ವೈದ್ಯಾಧಿಕಾರಿ ಹುದ್ದೆ ತುಂಬಲಾಗುತ್ತಿದೆ
-ಡಾ.ಐ.ಪಿ.ಗಡಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ
ರಾಮದುರ್ಗ ತಾಲ್ಲೂಕಿನಲ್ಲಿ 6 ಪಿಎಚ್‌ಸಿ ಇದ್ದು ನಾಲ್ಕೈದು ಕಡೆ ಇನ್ನೂ ಬೇಡಿಕೆ ಇದೆ. ಈ ಪೈಕಿ ಎರಡು ಕಡೆ ಆರಂಭಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಬನ್ನೂರ ತಾಂಡೆಯಲ್ಲಿ ಸರ್ಕಾರಿ ಜಾಗ ಸಿಕ್ಕಿದ್ದು ಚುಂಚನೂರಿನಲ್ಲಿ ಸಿಗಬೇಕಿದೆ
- ಡಾ.ನವೀನ ನಿಜಗುಲಿ ತಾಲ್ಲೂಕು ಆರೋಗ್ಯಾಧಿಕಾರಿ ರಾಮದುರ್ಗ
ಚನ್ನಮ್ಮನ ಕಿತ್ತೂರು ತಾಲ್ಲೂಕಿನಲ್ಲಿ ಪಿಎಚ್‌ಸಿಗಳ ಆರಂಭಕ್ಕೆ ಎಲ್ಲಿಯೂ ಬೇಡಿಕೆ ಬಂದಿಲ್ಲ. ಹುಣಸಿಕಟ್ಟಿ ಹೊರತುಪಡಿಸಿ ಉಳಿದೆಡೆ ಎಂಬಿಬಿಎಸ್ ಓದಿದ ವೈದ್ಯರ ಸೇವೆ ಲಭ್ಯವಿದೆ. ಹುಣಸಿಕಟ್ಟಿಯಲ್ಲಿ ಆಯುಷ್ ವೈದ್ಯರಿದ್ದು ಅಲ್ಲಿಯೂ ಶೀಘ್ರ ಎಂಬಿಬಿಎಸ್ ಓದಿದ ವೈದ್ಯರ ನೇಮಕ ಆಗಲಿದೆ
ಡಾ.ಎಸ್.ಎಸ್.ಸಿದ್ದಣ್ಣವರ ತಾಲ್ಲೂಕು ಆರೋಗ್ಯಾಧಿಕಾರಿ ಬೈಲಹೊಂಗಲ
ನಾವು ಚಿಕಿತ್ಸೆಗಾಗಿ ದೂರದ ಹೊಸಕೋಟಿಗೆ ಹೋಗಬೇಕಿದೆ. ಏಳು ಹಳ್ಳಿಗಳಿಗೆ ಕೇಂದ್ರಸ್ಥಾನವಾಗಿರುವ ನಮ್ಮೂರಿಗೆ ತುರ್ತಾಗಿ ಪಿಎಚ್‌ಸಿ ಅಗತ್ಯವಿದೆ
ಜಗದೀಶ ದೇವರಡ್ಡಿ ಮುಖಂಡ ಸಾಲಾಪುರ
ಆರೋಗ್ಯ ಸಮಸ್ಯೆಯಾದರೆ ಹಳೇತೊರಗಲ್ ಗ್ರಾಮಸ್ಥರು ಚಿಕಿತ್ಸೆಗೆ ರಾಮದುರ್ಗಕ್ಕೆ ಹೋಗಬೇಕಿದೆ. ಆದರೆ ಅಲ್ಲಿಗೆ ಸರಿಯಾಗಿ ಬಸ್ ಸೌಕರ್ಯ ಇಲ್ಲದ್ದರಿಂದ ಪರದಾಡುವಂತಾಗಿದೆ
ಜಹೂರ್ ಹಾಜಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೊಡಚಿ ಕ್ಷೇತ್ರ
ಖಾನಾಪುರ ತಾಲ್ಲೂಕಿನ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ದೊರೆಯುತ್ತಿಲ್ಲ. ಹಾಗಾಗಿ ಖಾಸಗಿ ವೈದ್ಯರ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ
ಮಲ್ಲಪ್ಪ ಮಾರಿಹಾಳ ಸಾಮಾಜಿಕ ಕಾರ್ಯಕರ್ತ ಚಾಪಗಾಂವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.