ADVERTISEMENT

ಚನ್ನಮ್ಮ ಝೂಗೆ ಶೀಘ್ರದಲ್ಲೇ 2 ಹುಲಿ: ಬಿ.ಪಿ. ರವಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 14:43 IST
Last Updated 2 ಫೆಬ್ರುವರಿ 2021, 14:43 IST
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿ ‘ಟೈಗರ್‌ ಸಫಾರಿ’ಗೆ ಮಾಡಿರುವ ವ್ಯವವ್ಥೆಯನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.‍ಪಿ. ರವಿ ಮಂಗಳವಾರ ಪರಿಶೀಲಿಸಿದರು 
ಬೆಳಗಾವಿ ತಾಲ್ಲೂಕಿನ ಭೂತರಾಮನಹಟ್ಟಿಯಲ್ಲಿ ‘ಟೈಗರ್‌ ಸಫಾರಿ’ಗೆ ಮಾಡಿರುವ ವ್ಯವವ್ಥೆಯನ್ನು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.‍ಪಿ. ರವಿ ಮಂಗಳವಾರ ಪರಿಶೀಲಿಸಿದರು    

ಬೆಳಗಾವಿ: ‘ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಶೀಘ್ರದಲ್ಲೇ ಎರಡು ಹುಲಿಗಳು ಸೇರ್ಪಡೆಯಾಗಲಿವೆ’ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ ತಿಳಿಸಿದರು.

ಮೃಗಾಯಲಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು, ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

‘ಶೀಘ್ರವೇ ತಜ್ಞರ ತಂಡ ಭೇಟಿ ನೀಡಿ, ಇಲ್ಲಿನ ಸೌಕರ್ಯಗಳನ್ನು ಪರಿಶೀಲಿಸಿ ವರದಿ ನೀಡಿದ ಬಳಿಕ ಎರಡು ಹುಲಿಗಳನ್ನು ತರಲಾಗುವುದು. ಚಿರತೆ ತರಲು ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಸಿಗಬೇಕಿದೆ. ಸಿಂಹಗಳನ್ನು ತರಲು ಬನ್ನೇರುಘಟ್ಟ ಮೃಗಾಲಯದ ನಿರ್ದೇಶಕರು ಅನುಮತಿ ನೀಡಿದ್ದಾರೆ. ಈ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವರದಿ ನೀಡಬೇಕಿದೆ. ಹಂತ ಹಂತವಾಗಿ ಮೃಗಾಲಯವನ್ನು ಆಕರ್ಷಕಗೊಳಿಸಲಾಗುವುದು’ ಎಂದರು.

ADVERTISEMENT

‘ಚನ್ನಮ್ಮ ಮೃಗಾಲಯದಲ್ಲಿ 28 ಪ್ರಬೇಧಗಳ ಪ್ರಾಣಿ ಮತ್ತು ಪಕ್ಷಿಗಳಿವೆ. ಸದ್ಯಕ್ಕೆ ನೀರಿನ ಸೌಲಭ್ಯವಿದೆ. ಜಲ ಮೂಲ ಹೆಚ್ಚಳಕ್ಕೆ ಜಿಲ್ಲಾ ಪಂಚಾಯ್ತಿಯಿಂದ ಅನುದಾನ ಕೇಳಲಾಗಿದೆ. ಇನ್ನೂ ₹ 6ರಿಂದ ₹ 7 ಕೋಟಿ ಬೇಕಾಗಿದೆ. ಪ್ರಸ್ತಾವ ಹಣಕಾಸು ಇಲಾಖೆಯಲ್ಲಿದೆ. ಈ ಸಂಬಂಧ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಅವರೊಂದಿಗೆ ಚರ್ಚಿಸಲಾಗಿದೆ’ ಎಂದು ಹೇಳಿದರು.

‘ಇಲ್ಲಿಗೆ ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗುವುದು. ಅವರಿಗೆ, ವನ್ಯಜೀವಿ ನಿರ್ವಹಣೆ ಕುರಿತು ತರಬೇತಿ ನೀಡಲಾಗುವುದು. ಮೈಸೂರು ಮೃಗಾಲಯದಿಂದ ತರಬೇತುದಾರರು ಬಂದು ಮಾರ್ಗದರ್ಶನ ನೀಡುತ್ತಾರೆ’ ಎಂದರು.

ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ. ಅಮರನಾಥ, ವಲಯ ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ವನ್ಯಜೀವಿ ಮತ್ತು ಪರಿಸರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಸುರೇಶ ಉರಬಿನಹಟ್ಟಿ, ಕಾರ್ಯದರ್ಶಿ ಡಾ.ಡಿ.ಎನ್. ಮಿಸಾಳೆ, ಜಗದೀಶ ಮಠದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.