ADVERTISEMENT

3 ಕಡೆಗಳಲ್ಲಿ ಕೋವಿಡ್ ಲಸಿಕೆ ‘ಅಣಕು’

​ಪ್ರಜಾವಾಣಿ ವಾರ್ತೆ
Published 1 ಜನವರಿ 2021, 15:08 IST
Last Updated 1 ಜನವರಿ 2021, 15:08 IST

ಬೆಳಗಾವಿ: ಇಲ್ಲಿನ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕಿತ್ತೂರು ಮತ್ತು ಹುಕ್ಕೇರಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ‘ಕೋವಿಡ್ ಲಸಿಕೆ ಅಣಕು’ (ಡ್ರೈ ರನ್ ಅಥವಾ ಪೂರ್ವಾಭ್ಯಾಸ) ಶನಿವಾರ (ಜ.2) ನಡೆಯಲಿದ್ದು, ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.

‘ಮೂರು ಕೇಂದ್ರಗಳಲ್ಲೂ ತಲಾ 25 ಮಂದಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಪೂರ್ವಾಭ್ಯಾಸಕ್ಕೆ ಬಳಸಲಾಗುತ್ತಿದೆ. ಅಧಿಕೃತವಾಗಿ ಲಸಿಕೆ ನೀಡುವುದಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದೆಲ್ಲ ಪ್ರಕ್ರಿಯೆಗಳನ್ನೂ ನಡೆಸಿ, ಲಸಿಕೆ ಬಂದಾಗ ಹಾಕುವುದಕ್ಕೆ ನಾವೆಷ್ಟು ಸಿದ್ಧವಿದ್ದೇನೆ ಎನ್ನುವ ಪರೀಕ್ಷೆ ಮಾಡಿಕೊಳ್ಳುವ ಅಣಕು ಇದಾಗಿದೆ. ಆಯ್ಕೆ ಮಾಡಲಾದ ವ್ಯಕ್ತಿಗಳಿಗೆ (ಕೊರೊನಾ ಸೇನಾನಿಗಳು) ಲಸಿಕೆ ನೀಡಿದಂತೆ ಮಾಡಲಾಗುವುದು. ಅವರಿಗೆ ಈ ಕುರಿತು ತಿಳಿಸಲಾಗಿದೆ ಮತ್ತು ಹಾಜರಾಗುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಸಂತಾನೋತ್ಪತಿ ಮತ್ತು ಮಕ್ಕಳ (ಆರ್‌ಸಿಎಚ್‌) ಅಧಿಕಾರಿ ಡಾ.ಐ.ಪಿ. ಗಡಾದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಲಸಿಕೆ ಕಾರ್ಯಕ್ಕಾಗಿ ‘ಕೋವಿನ್ ಅಪ್ಲಿಕೇಷನ್’ ಮಾಡಲಾಗಿದೆ. ಅದರಲ್ಲಿ ಎಲ್ಲ ಪ್ರಕ್ರಿಯೆಯನ್ನೂ ದಾಖಲಿಸಲಾಗುವುದು. ಅದನ್ನು ಹೇಗೆ ಬಳಸಬೇಕು ಎನ್ನುವ ಕಾರ್ಯ ಶನಿವಾರ ನಡೆಯಲಿದೆ. ನೋಂದಣಿ, ಲಸಿಕೆಯನ್ನು ಯಾರಿಗೆ ಮತ್ತು ಯಾವ ಸಮಯಕ್ಕೆ ನೀಡಲಾಗುವುದು, ಸ್ಥಳ ಯಾವುದು ಎನ್ನುವ ಎಲ್ಲ ಮಾಹಿತಿಯನ್ನೂ ಆ ಆಪ್ಲಿಕೇಷನ್‌ನಲ್ಲೇ ನಿರ್ವಹಿಸಲಾಗುವುದು. ಪ್ರತಿ ಕೇಂದ್ರದಲ್ಲೂ ತಲಾ ಐವರು ಲಸಿಕೆದಾರರನ್ನು ನಿಯೋಜಿಸಲಾಗಿದೆ. ತಾಲ್ಲೂಕಿಗೆ ಒಬ್ಬ ನೋಡಲ್ ಅಧಿಕಾರಿಯನ್ನೂ ನೇಮಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಕೇಂದ್ರಗಳಲ್ಲಿ ವೇಟಿಂಗ್ ರೂಂ, ಆನ್‌ಲೈನ್ ನೋಂದಣಿ ವಿಭಾಗ, ಲಸಿಕಾ ಕೊಠಡಿ, ಪರಿವೀಕ್ಷಣಾ ಕೊಠಡಿ ಸ್ಥಾಪನೆ ಮಾಡಲಾಗಿದೆ. ಎಲ್ಲ ಪ್ರಕ್ರಿಯೆಯನ್ನೂ ಪೋರ್ಟಲ್‌ನಲ್ಲಿ ದಾಖಲಿಸಲಾಗುವುದು. ಸಿಬ್ಬಂದಿಗೆ, ಹೊಸ ಕಾರ್ಯವೈಖರಿ ಹೇಗಿರುತ್ತದೆ ಎನ್ನುವ ಪ್ರಾಯೋಗಿಕ ತರಬೇತಿ ನೀಡುವ ಉದ್ದೇಶವೂ ಇದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.