ADVERTISEMENT

ಬೆಳಗಾವಿ | ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ: ರಮೇಶ ಜಾರಕಿಹೊಳಿ ಸೂಚನೆ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 3:06 IST
Last Updated 6 ಜೂನ್ 2020, 3:06 IST
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು
ಬೆಳಗಾವಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು   

ಬೆಳಗಾವಿ: ‘ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಎದುರಾಗಬಹುದಾದ ಪ್ರವಾಹ ಹಾಗೂ ಅತಿವೃಷ್ಟಿ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಕೋವಿಡ್-19 ನಿಯಂತ್ರಣ ಹಾಗೂ ನೆರೆ ಹಾವಳಿ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನೆರೆ ಹಾವಳಿ ನಿಯಂತ್ರಣಕ್ಕೆ ರಾಜ್ಯಮಟ್ಟದಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗುವುದು. ಮಹಾರಾಷ್ಟ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ನೈಜ ಮಾಹಿತಿ ಪಡೆದು ಮುಂಜಾಗ್ರತೆ ವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದರು.

ADVERTISEMENT

‘ಕೋವಿಡ್ ನಿಯಂತ್ರಣ ವಿಷಯದಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡಿದೆ. ಆರೋಗ್ಯ ಇಲಾಖೆಗೆ ಎಲ್ಲ ಇಲಾಖೆಯವರೂ ಸಹಕರಿಸಬೇಕು. ಮಹಾರಾಷ್ಟ್ರದಿಂದ ಹೆಚ್ಚಿನ ಜನರು ಬರುತ್ತಿರುವುದರಿಂದ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ಬಳ್ಳಾರಿ ನಾಲಾ ಸ್ವಚ್ಛತೆಗೆ ಸೂಚನೆ: ‘ನಗರದ ಬಳ್ಳಾರಿ ನಾಲಾದಲ್ಲಿ ತ್ಯಾಜ್ಯ ತುಂಬಿದ್ದರಿಂದ ನೀರು ಉಕ್ಕಿ ಹರಿದಿದ್ದರಿಂದ ಹೋದ ವರ್ಷ ದೊಡ್ಡ ಅನಾಹುತ ಆಗಿತ್ತು. ಆದ್ದರಿಂದ ನಾಲೆಯನ್ನು ಸ್ವಚ್ಛಗೊಳಿಸಬೇಕು’ ಎಂದು ತಾಕೀತು ಮಾಡಿದರು.

‘ನಾಲೆಗಳನ್ನು ಸ್ವಚ್ಛಗೊಳಿಸುವ ಜೊತೆಗೆ ಅತಿಕ್ರಮಣ ತೆರವುಗೊಳಿಸಬೇಕು. ಯಾರೇ ಒತ್ತುವರಿ ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿಕ್ರಮ ಕೈಗೊಳ್ಳಬೇಕು’ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಒತ್ತಾಯಿಸಿದರು.

‘ಅತಿಕ್ರಮಣ ತೆರವಿಗೆ ಸಮೀಕ್ಷೆ ನಡೆಸಬೇಕು. ಶೀಘ್ರವೇ ಶಾಸಕರೊಂದಿಗೆ ಸ್ಥಳ ಪರಿಶೀಲನೆ ನಡೆಸುತ್ತೇನೆ’ ಎಂದು ಸಚಿವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ‌ ಜೊಲ್ಲೆ, ‘ಕಳೆದ ಬಾರಿ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು’ ಎಂದರು.

ಕೆಲಸ ಸಿಗುವಂತೆ ಮಾಡಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ‘ಕೊರೊನಾ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ತೊಂದರೆಗೆ ಸಿಲುಕಿರುವ ಕಾರ್ಮಿಕರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅವರಿಗೆ ಕೆಲಸ ಸಿಕ್ಕರೆ, ಗಳಿಕೆ ಆರಂಭವಾದರೆ ಕಿಟ್‌ಗಳಿಗಾಗಿ ಬೇರೆಯವರ ಬಳಿಗೆ ಹೋಗುವುದು ತಪ್ಪುತ್ತದೆ’ ಎಂದು ತಿಳಿಸಿದರು.

ಶಾಸಕ ಸತೀಶ ಜಾರಕಿಹೊಳಿ, ‘ಮಳೆಗಾಲ ಆರಂಭಗೊಂಡಿರುವುದರಿಂದ ರೈತರು ಹಾಗೂ ವರ್ತಕರ ಹಿತದೃಷ್ಟಿಯಿಂದ ಎಪಿಎಂಸಿಯಲ್ಲೇ ವಹಿವಾಟು ಆರಂಭಿಸಬೇಕು’ ಎಂದರು.

‘ಕ್ವಾರಂಟೈನ್ ಇರುವವರನ್ನು ವರದಿ ಬರುವ ಮುಂಚೆಯೇ ಮನೆಗೆ ಕಳುಹಿಸಿದ್ದರಿಂದ ಕೆಲವು ಭಾಗಗಳಲ್ಲಿ ಸೋಂಕು ಹರಡಿದೆ. ಈಗ ತಪಾಸಣೆ ಪ್ರಮಾಣ ಕಡಿಮೆ ಮಾಡಿದರೆ ಮತ್ತಷ್ಟು ಹರಡುವ ಸಾಧ್ಯತೆ ಇದೆ. ಹೀಗಾಗಿ, ಮಹಾರಾಷ್ಟ್ರದಿಂದ ಬರುವ ಎಲ್ಲರನ್ನೂ ತಪಾಸಣೆಗೆ ಒಳಪಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ‘ಕಳೆದ ವರ್ಷ ಪ್ರವಾಹದಲ್ಲಿ ಮನೆ ಕಳೆದುಕೊಂಡಿರುವ ಕೆಲವರಿಗೆ ತಾಂತ್ರಿಕ ಕಾರಣದಿಂದ ಪರಿಹಾರದ ಮೊತ್ತ ತಲುಪಿಲ್ಲ. ತಕ್ಷಣವೆ ಮರು ಸಮೀಕ್ಷೆ ನಡೆಸಿ ಪರಿಹಾರ ಕಲ್ಪಿಸಬೇಕು’ ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಕೆ.ವಿ., ಕೋವಿಡ್-19 ವಿಶೇಷ ನಿಯಂತ್ರಣಾಧಿಕಾರಿ ರಾಜೇಂದ್ರ ಚೋಳನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.