ADVERTISEMENT

ಆಸ್ತಿ ನೋಂದಣಿ: ಆಂಬುಲೆನ್ಸ್‌ನಲ್ಲಿಯೇ ಕಚೇರಿಗೆ ವೃದ್ಧ ತಾಯಿ ಕರೆತಂದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 15:31 IST
Last Updated 1 ಅಕ್ಟೋಬರ್ 2022, 15:31 IST
ಬೆಳಗಾವಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ, ಬೆಡ್‌ ಮೇಲೆ ಮಲಗಿದ್ದ ಮಹಾದೇವಿ ಅಗಸಿಮನಿ ಅವರಿಂದ ಸಿಬ್ಬಂದಿ ಹಾಗೂ ಅಜ್ಜಿಯ ಮಕ್ಕಳು ಸಹಿ ಪಡೆದ ಸಂದರ್ಭ
ಬೆಳಗಾವಿಯ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ, ಬೆಡ್‌ ಮೇಲೆ ಮಲಗಿದ್ದ ಮಹಾದೇವಿ ಅಗಸಿಮನಿ ಅವರಿಂದ ಸಿಬ್ಬಂದಿ ಹಾಗೂ ಅಜ್ಜಿಯ ಮಕ್ಕಳು ಸಹಿ ಪಡೆದ ಸಂದರ್ಭ   

ಬೆಳಗಾವಿ: ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಯೊಬ್ಬರನ್ನು, ಆಸ್ತಿ ಪತ್ರಗಳ ಮೇಲೆ ಸಹಿ ಮಾಡಿಸಲು ಉಪನೋಂದಣಾಧಿಕಾರಿ ಕಚೇರಿಗೇ ಕರೆತಂದ ಘಟನೆ ನಡೆದಿದೆ.

ಈ ಘಟನೆ ಶುಕ್ರವಾರ ನಡೆದಿದೆ. ಈ ಕುರಿತ ದೃಶ್ಯಗಳಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶನಿವಾರ ಹರಿದಾಡಿವೆ.

ತಾಲ್ಲೂಕಿನ ಹಿರೇಬಾಗೇವಾಡಿ ನಿವಾಸಿ ಮಹಾದೇವಿ ಅಗಸಿಮನಿ (79) ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಅವರನ್ನು ದಾಖಲಿಸ ಲಾಗಿತ್ತು. ದಿನದಿಂದ ದಿನಕ್ಕೆ ಅವರ ಆರೋಗ್ಯ
ಕ್ಷೀಣಿಸುತ್ತಿತ್ತು.

ADVERTISEMENT

ಮಹಾದೇವಿ ಅವರ ಹೆಸರಿನಲ್ಲಿ 2 ಎಕರೆ 35 ಗುಂಟೆ ಜಮೀನು ಇದೆ. ಇದನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಅವರ ಪುತ್ರರು, ಪುತ್ರಿ ಸೇರಿಕೊಂಡು ಆಂಬುಲೆನ್ಸ್‌ನಲ್ಲಿ ಉಪ ನೋಂದಣಾಧಿಕಾರಿ ಕಚೇರಿಗೆ ಕರೆತಂದರು. ವಯೋವೃದ್ಧೆ ‘ವಿಶೇಷ ಬೆಡ್‌’ ಮೇಲೆ ನಿತ್ರಾಣ ಸ್ಥಿತಿಯಲ್ಲಿದ್ದಾಗೇ ಅಧಿಕಾರಿಗಳು ಹೆಬ್ಬೆರಳು ಗುರುತು ಪಡೆದುಕೊಂಡರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಉಪ ನೋಂದಣಾಧಿಕಾರಿ ಪದ್ಮನಾಭ ಗುಡಿ, ‘ಅನಾರೋಗ್ಯಕ್ಕೆ ಒಳಗಾದವರ ಸಹಿಗಾಗಿ ಸ್ಥಳಕ್ಕೆ ಹೋಗಲು ಅವಕಾಶವಿದೆ. ಕುಟುಂಬದವರು ಇದಕ್ಕೆ ₹ 1,000 ಶುಲ್ಕ ತುಂಬಿ ಅರ್ಜಿ ಸಲ್ಲಿಸಬೇಕು. ಆದರೆ, ಮಹಾದೇವಿ ಕುಟುಂಬದವರು ಅರ್ಜಿ ಸಲ್ಲಿಸಿಲ್ಲ. ಹಾಗಾಗಿ, ನಾವು ಆಸ್ಪತ್ರೆಗೆ ಹೋಗಿಲ್ಲ. ಏಕಾಏಕಿ ಕಚೇರಿಗೆ ಕರೆತಂದರು. ನಿಯಮಗಳ ಪ್ರಕಾರ ನೋಂದಣಿ ಮಾಡಿಸಿದ್ದೇವೆ’ ಎಂದರು. ಇದರ ವಿಡಿಯೊ ತುಣುಕುಗಳು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.

‘ಮಹಾದೇವಿ ಅವರಿಗೆ ನಮ್ಮಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅವರ ಕುಟುಂಬದವರು ವೈಯಕ್ತಿಕ ಜವಾಬ್ದಾರಿ ತೆಗೆದುಕೊಂಡು ಆಸ್ಪತ್ರೆಯಿಂದ ಕರೆದುಕೊಂಡು ಹೋಗುವುದಾಗಿ ಹೇಳಿದರು. ನಿಯಮಗಳ ಪ್ರಕಾರ ನಮ್ಮ ನೋಂದಣಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆ. ಮಾನವೀಯತೆ ದೃಷ್ಟಿಯಿಂದ ನಮ್ಮ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲೇ ಕಳುಹಿಸಿ ಕೊಟ್ಟಿದ್ದೇವೆ. ಅಜ್ಜಿ ಆರೋಗ್ಯ ಸ್ಥಿರವಾಗಿದ್ದು, ಶನಿವಾರ ಬೆಳಿಗ್ಗೆ ಅವರನ್ನು ಜನರಲ್‌ ವಾರ್ಡಿಗೆ ಸ್ಥಳಾಂತರಿಸಿದ್ದೇವೆ’ ಎಂದು ವೃದ್ಧೆಗೆ ಚಿಕಿತ್ಸೆ ನೀಡಿದ ವೈದ್ಯರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.