ADVERTISEMENT

ಬೆಳಗಾವಿ | ‘ಮನರೇಗಾ’ ಎಂದೇ ಮುಂದುವರಿಸಿ-ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ಧ ಎಸ್‌ಯುಸಿಐ–ಸಿ, ಎಐಕೆಕೆಎಂಎಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 3:02 IST
Last Updated 31 ಡಿಸೆಂಬರ್ 2025, 3:02 IST
‘ಜಿ ರಾಮ್‌ಜಿ’ ಹಿಂಪಡೆದು ‘ಮನರೇಗಾ’ ಎಂಬ ಕಾಯ್ದೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ, ಬೆಳಗಾವಿಯಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ಎಸ್‌ಯುಸಿಐ–ಸಿ, ಎಐಕೆಕೆಎಂಎಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು  ಪ್ರಜಾವಾಣಿ ಚಿತ್ರ
‘ಜಿ ರಾಮ್‌ಜಿ’ ಹಿಂಪಡೆದು ‘ಮನರೇಗಾ’ ಎಂಬ ಕಾಯ್ದೆಯನ್ನೇ ಮುಂದುವರಿಸಬೇಕು ಎಂದು ಆಗ್ರಹಿಸಿ, ಬೆಳಗಾವಿಯಲ್ಲಿ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ಎಸ್‌ಯುಸಿಐ–ಸಿ, ಎಐಕೆಕೆಎಂಎಸ್‌ ವತಿಯಿಂದ ಪ್ರತಿಭಟನೆ ನಡೆಸಲಾಯಿತು  ಪ್ರಜಾವಾಣಿ ಚಿತ್ರ   

ಬೆಳಗಾವಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆ ಹೆಸರು ಬದಲಾಯಿಸಿ,  ವಿಕಸಿತ ಭಾರತ್– ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) (ಜಿ ರಾಮ್ ಜಿ)–2025 ಎಂದು ಹೊಸ ರೂಪ ನೀಡಲಾಗಿದೆ. ಈ ಕ್ರಮವನ್ನು ಕೈ ಬಿಟ್ಟು ಮೊದಲಿನಂತೆಯೇ ಮುಂದುವರಿಸಬೇಕು ಎಂದು ಆಗ್ರಹಿಸಿ, ಸೋಷಿಯಲಿಸ್ಟ್‌ ಯೂನಿಟಿ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌) ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಮಿಕರು, ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಸಂಸತ್‍ನಲ್ಲಿ ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಕಾಯ್ದೆ ಅಂಗೀಕರಿಸಿ ರಾಷ್ಟ್ರಪತಿಯವರಿಗೆ ಕಳಿಸಲಾಗಿದೆ. ರಾಷ್ಟ್ರಪತಿಯವರೂ ಅಂಕಿತ ಹಾಕಿದ್ದಾರೆ. ಈ ಹೊಸ ಯೋಜನೆ ಮಹಾತ್ಮ ಗಾಂಧಿ ಹೆಸರನ್ನು ಅಳಿಸುವುದಕ್ಕಷ್ಟೇ ಸೀಮಿತವಾಗಿಲ್ಲ. ಬದಲಿಗೆ ಯೋಜನೆಯ ಆತ್ಮವನ್ನೇ ಕಿತ್ತೊಗೆಯುತ್ತಿದೆ ಎಂದು ಮನವಿಯಲ್ಲಿ ದೂರಿದ್ದಾರೆ.

ADVERTISEMENT

ಈ ಬದಲಾವಣೆ ಮೂಲಕ ಸರ್ಕಾರವು ಬಡವರ ಸ್ವಾಭಿಮಾನ ಕಸಿದಿದೆ. ಕೆಲಸ ಮಾಡಲು ತಯಾರಿರುವವರಿಗೆ ಕೆಲಸದ ಹಕ್ಕನ್ನು ಕೊಟ್ಟಿದ್ದ ಮನರೇಗಾ ಕಾರ್ಯಕ್ರಮ. ಬಡವರ ಪರವಾದ ಅತ್ಯಂತ ಪ್ರಭಾವಶಾಲಿ ಯೋಜನೆಯೆಂದು ಹೆಸರು ಮಾಡಿತ್ತು. ಮೊದಲು ಕೇವಲ ಯೋಜನೆಯಷ್ಟೇ ಆಗಿದ್ದ ಇದನ್ನು ಕಾನೂನಿನ ಮೂಲಕ ಹಕ್ಕಾಗಿ ಪರಿವರ್ತಿಸಲಾಯಿತು. ಈ ಮೂಲಕ ಬಡತನ, ಉದ್ಯೋಗ ಖಾತ್ರಿ ಮತ್ತು ಸಾಮಾಜಿಕ ಸುರಕ್ಷತೆಗೆ ಒಂದು ಹೊಸ ಆಯಾಮ ದೊರೆಯಿತು. ಮನರೇಗಾದಿಂದ ಕನಿಷ್ಠ ಕೂಲಿಯ ದರದಲ್ಲಿ ಹೆಚ್ಚಳವಾಯಿತು. ಗ್ರಾಮ ಭಾರತ ಸುಧಾರಣೆಗೆ ತಂದ ಯೋಜನೆಯನ್ನು ಹಳ್ಳ ಹಿಡಿಸಲಾಗುತ್ತಿದೆ ಎಂದೂ ದೂರಿದರು.

ಹೊಸ ಮಸೂದೆಯಲ್ಲಿ ಅನೇಕ ತೊಡಕುಗಳಿವೆ. ಕೆಲಸದ ದಿನಗಳನ್ನು 125 ದಿನಗಳಿಗೆ ಹೆಚ್ಚಿಸಲಾಗುವುದೆಂದು ಹೇಳಿದ್ದರೂ ಕೇಂದ್ರ ಸರ್ಕಾರ ಸೂಚಿಸಿದ ಜಿಲ್ಲೆ ಮತ್ತು ಗ್ರಾಮಗಳಲ್ಲಿ, ಮೊದಲೇ ಗುರುತಿಸಿ ಅಂಗೀಕರಿಸಿರುವ ರಾಷ್ಟ್ರನಿರ್ಮಾಣ ಯೋಜನೆಗಳಲ್ಲಿ, ಕೃಷಿ ಕೆಲಸಗಳು ಹೆಚ್ಚಿರುವ 60 ದಿನಗಳನ್ನು ಹೊರತು ಪಡಿಸಿ ಒಟ್ಟಾರೆ ಬಜೆಟ್ಟಿನಲ್ಲಿ ನಿಗದಿಪಡಿಸಿದ ಮೊತ್ತ ಮೀರದಂತೆ ಕೆಲಸ ಕೊಡುವುದಾಗಿ ಮಸೂದೆ ಹೇಳುತ್ತದೆ. ಅಂದರೆ, ಇದು ಜನರ ಹಕ್ಕಲ್ಲ, ಕಾರ್ಯಕ್ರಮ ಸಾರ್ವತ್ರಿಕವೂ ಅಲ್ಲ. ಮೇಲಾಗಿ ಕೇಂದ್ರ ಸರ್ಕಾರ ತನ್ನ ಪಾಲನ್ನು ಶೇ 90ರಿಂದ ಶೇ 60ಕ್ಕೆ ಇಳಿಸಿ ರಾಜ್ಯ ಸರ್ಕಾರಗಳ ಮೇಲೆ ಶೇ 40ರಷ್ಟು ಹೊರೆ ಹಾಕಿರುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಏಕೆಂದರೆ ಈಗಾಗಲೇ ಜಿಎಸ್‍ಟಿ ಕಾರಣಕ್ಕೆ ಅನುದಾನ ಕೊರತೆಯಿಂದ ಬಳಲುತ್ತಿರುವ ರಾಜ್ಯಗಳಿಗೆ ಹೆಚ್ಚಿನ ಹೊರೆಯನ್ನು ಹಾಕಿರುವುದು ಒಕ್ಕೂಟ ತತ್ವಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ಹೊರಹಾಕಲಾಗಿದೆ. 

ಮನರೇಗಾ ಕಾಯಿದೆಯನ್ನು  ಹೆಚ್ಚು ರೈತಸ್ನೇಹಿಯಾಗಿ, ಕಾರ್ಮಿಕ ಸ್ನೇಹಿಯಾಗಿ ರೂಪಿಸಿ, ಮಾನವ ದಿನಗಳನ್ನು 200ಕ್ಕೆ ಏರಿಸಬೇಕು ಮತ್ತು ಕೂಲಿಯ ದರವನ್ನು ₹600ಕ್ಕೆ ಏರಿಸಿ ಮರುಜಾರಿ ಮಾಡಬೇಕು ಎಂದೂ ಆಗ್ರಹಿಸಲಾಗಿದೆ.

ಎಐಕೆಕೆಎಂಎಸ್‌ ಸಂಘಟನೆಯ ಜಿಲ್ಲಾ ಸಂಚಾಲಕ ಲಕ್ಕಪ್ಪ ಬಿಜ್ಜನ್ನವರ, ಎಸ್‌ಯುಸಿಐ–ಸಿ ಸದಸ್ಯ ರಾಜು ಗಾಣಗಿ ನೇತೃತ್ವದಲ್ಲಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ದುಡಿಯುವ ಕೈಗಳ ಉದ್ಯೋಗ ಕಸಿಯುವ ಯತ್ನ ಗಾಂಧಿ ಹೆಸರು ಮಾತ್ರವಲ್ಲ; ಬಡವರ ಸ್ವಾಭಿಮಾನಕ್ಕೂ ಕೊಕ್‌ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹೇರಿದ ಕೇಂದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.