ADVERTISEMENT

ಬೆಳಗಾವಿ ಪಾಲಿಕೆ ಸದಸ್ಯನಿಂದ ನಿಂದನೆ: ಧರಣಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 14:11 IST
Last Updated 13 ಮಾರ್ಚ್ 2025, 14:11 IST
ಬೆಳಗಾವಿ ಮಹಾನಗರ ಪಾಲಿಕೆ  ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಗುರುವಾರ ಧರಣಿ ನಡೆಯಿತು
ಬೆಳಗಾವಿ ಮಹಾನಗರ ಪಾಲಿಕೆ  ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಗುರುವಾರ ಧರಣಿ ನಡೆಯಿತು   

ಬೆಳಗಾವಿ: ಮಹಾನಗರ ಪಾಲಿಕೆ ಸದಸ್ಯ ರಿಯಾಜ್‌ ಖಿಲ್ಲೇದಾರ ಅವರು ಕರ್ತವ್ಯ ನಿರತ ಅಧಿಕಾರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ ಗುರುವಾರ ಧರಣಿ ನಡೆಸಿದರು.

ಬೆಳಗಾವಿ ಮಹಾನಗರ ಪಾಲಿಕೆ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ, ಪಾಲಿಕೆ ಮೆಟ್ಟಿಲುಗಳ ಮುಂದೆ ಕುಳಿತ ಅಧಿಕಾರಿ ಹಾಗೂ ಸಿಬ್ಬಂದಿ ಮೌನ ಪ್ರತಿಭಟನೆ ಮಾಡಿದರು. ತೋಳುಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಆಕ್ರೋಶ ವ್ಯಕ್ತಪಡಿಸಿದರು. ನಂತರ ಮೇಯರ್‌ ಸವಿತಾ ಕಾಂಬಳೆ ಅವರಿಗೆ ಮನವಿ ಸಲ್ಲಿಸಿದರು.

ಅಧಿಕಾರಿ ಹಾಗೂ ಸಿಬ್ಬಂದಿಗೆ ರಕ್ಷಣೆ ಕೊಡಬೇಕು, ಅರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದರು.

ADVERTISEMENT

‘ಮಾರ್ಚ್‌ 12ರಂದು ಪಾಲಿಕೆ ಕಚೇರಿಯಲ್ಲಿ ರಿಯಾಜ್‌ ಖಿಲ್ಲೇದಾರ, ಕಂದಾಯ ಅಧಿಕಾರಿ ಸಂತೋಷ ಆನಿಶೆಟ್ಟರ್‌ ಅವರಿಗೆ ಮನಸೋಇಚ್ಛೆ ಬೈದಿದ್ದಾರೆ. ಅವಾಚ್ಯ ಪದ ಬಳಸಿದ್ದಾರೆ. ಕೆಲಸ ಮಾಡಿಕೊಡದಿದ್ದರೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ’ ಎಂದರು.

‘ಆರೋಗ್ಯಾಧಿಕಾರಿ ಸಂಜೀವ ನಾಂದ್ರೆ ಹಾಗೂ ಸಹಾಯಕ ಕಂದಾಯ ಅಧಿಕಾರಿ ಪಿ.ಬಿ. ಮೇತ್ರಿ ಅವರಿಗೂ ಸಾರ್ವಜನಿಕರು ಜೀವ ಬೆದರಿಕೆ ಹಾಕಿದ್ದಾರೆ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ, ಕೆಲವರು ಒತ್ತಾಯದಿಂದ ತಮ್ಮ ಕೆಲಸ ಮಾಡಿಕೊಡಲು ಹೇಳುತ್ತಾರೆ. ಇದ್ದಕ್ಕೆ ಒಪ್ಪದಿದ್ದಾಗ ಹಲ್ಲೆ ಮಾಡಲು ಮುಂದಾಗುತ್ತಾರೆ’ ಎಂದೂ ದೂರಿದರು.

‘ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಮೇಲಿಂದ ಮೇಲೆ ದೌರ್ಜನ್ಯಗಳು ಜರುಗುತ್ತಿವೆ. ನೌಕರರು ನಿರ್ಭೀತಿಯಿಂದ ಕೆಲಸ ಮಾಡುವುದು ದುಸ್ತರವಾಗಿದೆ’ ಎಂದೂ ಹೇಳಿದರು.

ಸಂಘದ ಅಧ್ಯಕ್ಷ ಮಲೀಕ ಗುಂಡಪ್ಪನವರ, ಉಪಾಧ್ಯಕ್ಷ ಭರತ ತಳವಾರ, ‍ಪ್ರಧಾನ ಕಾರ್ಯದರ್ಶಿ ಸುರೇಶ ದ್ಯಾವಣ್ಣವರ ನೇತೃತ್ವದಲ್ಲಿ ಎಲ್ಲ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ಪಾಲಿಕೆಗೆ ವಿವಿಧ ಕೆಲಸಗಳಿಗಾಗಿ ಬಂದಿದ್ದ ಜನ ಗಂಟೆಗಟ್ಟಲೇ ಕಾಯಬೇಕಾಯಿತು. ಹಲವರು ವಾಪಸ್‌ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.