ಕಾಗವಾಡ: ಕಳೆದ ಅನೇಕ ದಿನಗಳಿಂದ ವಿವಾದಕ್ಕೆ ಕಾರಣವಾಗಿರುವ ಜುಗೂಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಹಾಪುರ ಸ್ಮಶಾನ ಭೂಮಿ ವಿವಾದ ತಾರಕಕ್ಕೇರಿದ್ದು, ಗ್ರಾಮದ ಸ್ಮಶಾನ ಭೂಮಿ ಶಹಾಪುರ ಗ್ರಾಮಸ್ಥರಿಗೆ ಸಲ್ಲಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಸದಸ್ಯ ವಿಜಯ ನಾಯಿಕ ಮಾತನಾಡಿ, ‘200 ವರ್ಷಗಳ ಹಿಂದೆ ಸಂಕೇಶ್ವರದ ಸ್ವಾಮೀಜಿ ನಮಗೆ ಈ ಜಮೀನನ್ನು ದಾನ ನೀಡಿದ್ದರು. ಅದು ಲಿಂಗಾಯತ ಸ್ಮಶಾನ ಭೂಮಿಯಾಗಿದ್ದು ಕೇವಲ ಶಹಾಪುರ ಗ್ರಾಮಸ್ಥರಿಗೆ ಸೇರಿದೆ. ಅದರಲ್ಲಿ ಜುಗೂಳ ಗ್ರಾಮಸ್ಥರಿಗೆ ಯಾವುದೇ ಅಧಿಕಾರ ಇಲ್ಲ. ಇಷ್ಟಾಗಿಯೂ ಜುಗೂಳ ಗ್ರಾಮದ ಜನರಿಗೆ ಇಲ್ಲಿಯವರೆಗೆ ಸಹಕಾರ ನೀಡಿ ಶವಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದೆವು. ಈಗ ರಾಜಕೀಯ ಒತ್ತಡಕ್ಕೆ ಮಣಿದು ನಮಗೆ ಸೇರಿದ ಸ್ಮಶಾನ ಭೂಮಿಯನ್ನು ಅಧಿಕಾರಿಗಳು ಜುಗೂಳ ಗ್ರಾಮಸ್ಥರಿಗೆ ನೀಡುವ ಹುನ್ನಾರ ಮಾಡಿದ್ದಾರೆ. ನಾವು ಹಾಕಿರುವ ತಂತಿ ಬೇಲಿಯನ್ನು ಪೊಲೀಸರ ರಕ್ಷಣೆಯಲ್ಲಿ ತೆರವುಗೊಳಿಸಿದ್ದಾರೆ. ಅದನ್ನು ಪ್ರಶ್ನಿಸಲು ಹೋದರೇ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಸೇರಿದ ಸ್ಮಶಾನ ಭೂಮಿ ನಮಗೆ ಸೇರಬೇಕು. ಅದು ಸರ್ಕಾರಿ ಜಾಗ ಅಲ್ಲ. ಇದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು. ಸಮಸ್ಯೆಗೆ ಕೂಡಲೇ ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಸ್ಥಳಕ್ಕೆ ಉಪತಹಶೀಲ್ದಾರ್ ರಶ್ಮಿ ಜಕಾತಿ, ತಾಲ್ಲೂಕು ಪಂಚಾಯಿತಿ ಇಒ ವೀರಣ್ಣಾ ವಾಲಿ, ಉಪತಹಶೀಲ್ದಾರ್ ಅಣ್ಣಾಸಾಬ ಕೋರೆ, ಪಿಎಸ್‌ಐ ಗಂಗಾ ಬಿರಾದರ, ಪಿಡಿಒ ಶೈಲಶ್ರೀ ಬಜಂತ್ರಿ ಬಂದು ಪ್ರತಿಭಟನಕಾರರ ಮನವೊಲಿಸಿದರು. ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಮುಖಂಡರಾದ ದೀಪಕ ಪಾಟೀಲ, ಮಾದಗೌಡಾ ಪಾಟೀಲ, ಸಂತೋಶ ಪಾಟೀಲ, ಬಬನ ಕಮತೆ, ಪ್ರಮೋದ ಪಾಟೀಲ, ಬಾಬು ಕಾಂಬಳೆ, ತುಕಾರಾಮ ಕಾಂಬಳೆ, ಕಲ್ಲಪ್ಪಾ ದೊಡಮನಿ, ಶ್ರೀಪಾಲ ಸನದಿ, ಸುಶೀಲಾ ಕಾಂಬಳೆ, ಗುಣವಂತಿ ಕಾಂಬಳೆ, ವಿಜಯಾ ಕಾಂಬಳೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.