
ಬೈಲಹೊಂಗಲ: ಪುರಸಭೆ ಅಧಿಕಾರ ಅವಧಿ ಐದು ವರ್ಷಗಳ ಕಾಲ ಪೂರ್ಣಗೊಳ್ಳದೆ ಇದ್ದರೂ ಸರ್ಕಾರ ಅಧಿಕಾರ ಮುಗಿಯಲಿದೆ ಎಂದು ತಿಳಿಸಿ ಪತ್ರ ಬರೆದಿದ್ದನ್ನು ವಿರೋಧಿಸಿ ಸ್ಥಳೀಯ ಪುರಸಭೆ ಅಧ್ಯಕ್ಷ ವಿಜಯ ಬೋಳಣ್ಣವರ ನ್ಯಾಯಾಲಯ ಮೆಟ್ಟಿಲು ಏರಿದ್ದಾರೆ.
27.10.2025ಕ್ಕೆ ಪುರಸಭೆ ಸದಸ್ಯರ ಅಧಿಕಾರ ಪೂರ್ಣಗೊಳ್ಳಲಿದೆ. ವಾರ್ಡ್ ವಾರು ಮೀಸಲಾತಿ ನಿಗದಿಗೊಳಿಸುವಂತೆ ಸರ್ಕಾರ ತಿಳಿಸಿತ್ತು. ಅಧ್ಯಕ್ಷರ ಮೀಸಲಾತಿ ಹಾಗೂ ಇನ್ನಿತರ ಕಾರಣಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆದ ಸಂದರ್ಭದಲ್ಲಿ ಪುರಸಭೆ ಸದಸ್ಯರಿಗೆ ಅಧಿಕಾರ ಭಾಗ್ಯ ಸಿಕ್ಕಿರಲಿಲ್ಲ. ಈ ಅವಧಿಯನ್ನು ಹೊರತುಪಡಿಸಿ ನಮಗೆ ಐದು ವರ್ಷಗಳ ಅಧಿಕಾರ ನಡೆಸಲು ಅವಕಾಶ ಕೊಡಬೇಕು ಎಂಬ ಬೇಡಿಕೆ ಇಟ್ಟು ಪ್ರಸ್ತುತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ.
ರಾಜ್ಯ ಸರ್ಕಾರ, ಪುರಸಭೆ ಆಡಳಿತಾತ್ಮಕ ನಿರ್ದೇಶಕರು, ಬೆಳಗಾವಿ ಡಿಸಿ, ಬೈಲಹೊಂಗಲ ಪುರಸಭೆ, ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಾಲಯ ನೋಟೀಸ್ ನೀಡಿದ್ದು, ಪ್ರಕರಣದ ಕುರಿತು ಮಾಹಿತಿ ನೀಡುವಂತೆ ತಿಳಿಸಿದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಸದಸ್ಯರ ಆಡಳಿತಕ್ಕೆ ಅಡತಡೆ ಇಲ್ಲವೆಂದು ಭಾವಿಸಿದ್ದಾಗಿ ಪುರಸಭೆ ಅಧ್ಯಕ್ಷ ವಿಜಯ ಬೋಳಣ್ಣವರ ತಿಳಿಸಿದ್ದಾರೆ.
ನ್ಯಾಯಯುತವಾಗಿ ನಮಗೆ ಇನ್ನೂ 16 ತಿಂಗಳು ಅಧಿಕಾರ ದೊರೆಯಬೇಕಾಗಿದೆ. ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿರುವುದಾಗಿ 'ಪ್ರಜಾವಾಣಿ' ಗೆ ತಿಳಿಸಿದರು.
ಸಣ್ಣ ಮನೆ ನಿರ್ಮಿಸುವವರಿಗೆ ಸಿಹಿ ಸುದ್ದಿ: ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 190 (2ಎ) ಅಡಿ ಸರಕಾರಕ್ಕೆ ಇರುವ ಅಧಿಕಾರ ಬಳಸಿ ಸರ್ಕಾರ ಬಡ-ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ನೀಡಿದೆ.
1200 ಚದರ ಅಡಿಯಲ್ಲಿ ಮನೆ ನಿರ್ಮಿಸಿರುವರು ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ. ನೆಲ+2ಅಂತಸ್ತು ಅಥವಾ ಸ್ಟಿಲ್ಟ +3 ಅಂತಸ್ತಿನವರೆಗಿನ ವಾಸದ ಕಟ್ಟಡಗಳಿಗೆ ಈ ಸೌಲಭ್ಯ ದೊರೆಯಲಿದೆ. ಇದರ ಪ್ರಯೋಜನೆ ಪಡೆಯಬೇಕು ಮತ್ತು ಈ ಬಗ್ಗೆ ಪುರಸಭೆಯಲ್ಲಿ ವಿಚಾರಿಸಬೇಕು ಎಂದು ಪುರಸಭೆ ಅಧ್ಯಕ್ಷ ವಿಜಯ ಬೋಳಣ್ಣವರ ಪ್ರಕಟಣೆಯಲ್ಲಿ ಇದೇ ವೇಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.