
ಚಿಕ್ಕೋಡಿ: ಪಟ್ಟಣದಲ್ಲಿ ₹40 ಲಕ್ಷ ಮೊತ್ತದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಗ್ರಂಥಾಲಯ, ಬಿಇಒ ಕಚೇರಿ ಆವರಣ ಹಾಗೂ ಹೆಸ್ಕಾಂ ಕಚೇರಿ ಆವರಣದಲ್ಲಿರುವ ಎರಡು ಇಂದಿರಾ ಕ್ಯಾಂಟಿನ್ ಜ.26ರಂದು ಬೆಳಿಗ್ಗೆ 11 ಗಂಟೆಗೆ ಉದ್ಘಾಟನೆಗೆ ಸಿದ್ಧಗೊಂಡಿವೆ.
ಪಟ್ಟಣದ ಹಳೆಯ ಪುರಸಭೆ ಕಚೇರಿಗೆ ಹೊಂದಿಕೊಂಡು ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡ ಕಾಮಗಾರಿ ಪೂರ್ಣಗೊಂಡು 6-7 ತಿಂಗಳು ಕಳೆದಿತ್ತು. ಹೀಗಾಗಿ ಕಳೆದ 2-3 ವರ್ಷಗಳಿಂದ ಶಾಸಕರ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯ ಕೊಠಡಿಗಳಲ್ಲಿ ಗ್ರಂಥಾಲಯ ನಿರ್ವಹಣೆ ಮಾಡಲಾಗುತ್ತಿತ್ತು. ಹಾಗೇನೇ ಬಸವೇಶ್ವರ ವೃತ್ತದ ಬಳಿಯ ಬಿಇಒ ಕಚೇರಿ ಆವರಣದಲ್ಲೊಂದು ಹಾಗೂ ನಿಪ್ಪಾಣಿ ರಸ್ತೆಯ ಹೆಸ್ಕಾಂ ಕಚೇರಿ ಆವರಣದಲ್ಲೊಂದು ಹೇಗೆ ಎರಡು ಇಂದಿರಾ ಕ್ಯಾಂಟಿನ್ ಕಟ್ಟಡ ನಿರ್ಮಾಣವಾಗಿ 4-5 ತಿಂಗಳು ಕಳೆದಿತ್ತು.
ಜ.26ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕ ಗ್ರಂಥಾಲಯ, ಇಂದಿರಾ ಕ್ಯಾಂಟಿನ್ ಉದ್ಘಾಟನೆಗೊಳ್ಳಲಿವೆ.
ಇವೆರಡೂ ಕಟ್ಟಡಗಳು ಸಿದ್ಧವಾಗಿದ್ದರೂ ಉದ್ಘಾಟನೆಗೆ ಭಾಗ್ಯ ಕೂಡಿ ಬಂದಿರಲಿಲ್ಲ. ಈ ಕುರಿತು ‘ಪ್ರಜಾವಾಣಿ’ ಜ.1, 2026ರಂದು ಸಂಚಿಕೆಯಲ್ಲಿ ‘ಸರ್ಕಾರಿ ಕಟ್ಟಡ ಸಿದ್ಧವಾಗಿದ್ದರೂ ಉದ್ಘಾಟನೆ ಭಾಗ್ಯ ಬಂದಿಲ್ಲ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.