ADVERTISEMENT

ಪಲ್ಸ್‌ ಪೋಲಿಯೊ ಕಾರ್ಯಕ್ರಮ 17ಕ್ಕೆ

ಯಶಸ್ವಿಗೊಳಿಸಲು ಅಧಿಕಾರಿಗಳಿಗೆ ಡಿ.ಸಿ. ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 13:52 IST
Last Updated 7 ಜನವರಿ 2021, 13:52 IST
ಬೆಳಗಾವಿಯಲ್ಲಿ  ಪಲ್ಸ್ ಪೋಲಿಯೊ ಕಾರ್ಯಕ್ರಮದ ಪ್ರಚಾರ ಸಾಮಗ್ರಿಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಗುರುವಾರ ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ  ಪಲ್ಸ್ ಪೋಲಿಯೊ ಕಾರ್ಯಕ್ರಮದ ಪ್ರಚಾರ ಸಾಮಗ್ರಿಯನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಗುರುವಾರ ಬಿಡುಗಡೆ ಮಾಡಿದರು   

ಬೆಳಗಾವಿ: ‘ಜಿಲ್ಲೆಯಾದ್ಯಂತ ಜ. 17ರಂದು ಹಮ್ಮಿಕೊಂಡಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮ ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚನೆ ನೀಡಿದರು.

ಇಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಒಂಬತ್ತು ವರ್ಷಗಳಿಂದ ದೇಶದಲ್ಲಿ ಯಾವುದೆ ಒಂದು ಪೋಲಿಯೊ ಪ್ರಕರಣವು ದಾಖಲಾಗಿಲ್ಲ. ಈ ಬೆಳವಣಿಗೆಯು ಹೀಗೆಯೇ ಮುಂದುವರಿಯಬೇಕು. ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಬೇಕಾದಂತಹ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಕಳೆದ ವರ್ಷ ನಡೆದ ಕಾರ್ಯಕ್ರಮದಲ್ಲಿ ಸಂಪೂರ್ಣ ಗುರಿ ಸಾಧಿಸಲಾಗಿತ್ತು. ಈ ವರ್ಷವೂ ಅದು ಮುಂದುವರಿಯಬೇಕು’ ಎಂದರು.

ADVERTISEMENT

‘ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಶಿಕ್ಷಣ ಇಲಾಖೆಯವರು ಪ್ರಮುಖ ಪಾತ್ರ ವಹಿಸಬೇಕು. ಎಲ್ಲ ಇಲಾಖೆಯವರು ಹಾಗೂ ಸರ್ಕಾರಿ, ಸರ್ಕಾರೇತರ ಆಸ್ಪತ್ರೆಗಳಲ್ಲಿ ಬೂತ್‌ಗಳ ಮೂಲಕ ನಡೆಸಿ ಯಶಸ್ವಿಗೊಳಿಸಬೇಕು’ ಎಂದರು.

ಆರ್‌ಸಿಎಚ್‌ ಡಾ.ಆರ್.ಐ. ಗಡಾದ, ‘ಮೂರು ಮೂರು ದಿನಗಳವರೆಗೆ ಪೋಲಿಯೊ ಕಾರ್ಯಕ್ರಮ ನಡೆಸಲಾಗುವುದು. ಮೊದಲನೇ ದಿನ ಬೂತ್‌ಗಳಲ್ಲಿ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುವುದು. ಎರಡು ಮತ್ತು ಮೂರನೇ ದಿನ ಮನೆ ಮನೆಗೆ ಭೇಟಿ ನೀಡುವ ಮೂಲಕ 0–5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಕೊಡಲಾಗುವುದು’ ಎಂದು ತಿಳಿಸಿದರು.

ಜಿ.ಪಂ. ಸಿಇಒ ಎಚ್‌.ವಿ. ದರ್ಶನ್, ಮಹಾನಗರಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಡಿಸಿಪಿ ವಿಕ್ರಂ ಆಮಟೆ, ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ಬಿಮ್ಸ್ ಆಸ್ಪತ್ರೆ ವೈದ್ಯಕೀಯ ಸೂಪರಿಂಡೆಂಡೆಂಟ್ ಗಿರೀಶ್ ದಂಡಗಿ, ಜಿಲ್ಲಾ ಕ್ಷಯರೋಗ ಹಾಗೂ ಏಡ್ಸ್ ನಿಯಂತ್ರಾಣಾಧಿಕಾರಿ ಅನಿಲ ಕೊರಬು, ಜಿಲ್ಲಾ ಕುಷ್ಠರೋಗ ಮತ್ತು ಅಂಧತ್ವ ನಿಯಂತ್ರಾಣಾಧಿಕಾರಿ ಚಾಂದಿನಿ ಜೆ. ದೇವಡಿ, ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಎಂ.ಎಸ್. ಪಲ್ಲೇದ, ಜಿಲ್ಲಾ ಸಮೀಕ್ಷಣಾಧಿಕಾರಿ ಬಿ.ಎಸ್. ತುಕ್ಕಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.