ಸಂತಿ ಬಸ್ತವಾಡ ಗ್ರಾಮದಲ್ಲಿ ಕುರಾನ್ ಸುಟ್ಟುಹಾಕಿದ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ, ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಮುಸ್ಲಿಂ ಯುವಕರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು
ಪ್ರಜಾವಾಣಿ ಚಿತ್ರ
ಬೆಳಗಾವಿ: ‘ತಾಲ್ಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಿರ್ಮಾಣ ಹಂತದ ಮಸೀದಿಯ ಕೆಳ ಮಹಡಿಯಲ್ಲಿದ್ದ ಕುರಾನ್ ಪುಸ್ತಕವನ್ನು ಕದ್ದೊಯ್ದು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ತನಿಖೆ ನಡೆಸಿದ್ದಾರೆ. ಆರೋಪಿಗಳ ಬಂಧನವಾಗಲಿದೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಧಾರ್ಮಿಕ ವಿಚಾರಗಳಲ್ಲಿ ಪದೇ ಪದೇ ಕಾನೂನು ಉಲ್ಲಂಘನೆಗಳು ಆಗುತ್ತಿರುವುದು ನನ್ನ ಗಮನಕ್ಕೂ ಬಂದಿದೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಳೊಂದಿಗೆ ಚರ್ಚಿಸಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲು ಸೂಚಿಸುತ್ತೇನೆ’ ಎಂದರು.
‘ಘಟನೆ ನಡೆದಾಗ ಸ್ಥಳದಲ್ಲಿ ಯಾರೂ ಇರಲಿಲ್ಲ. ಸಿಸಿಟಿವಿ ಕ್ಯಾಮೆರಾ ಕೂಡ ಇಲ್ಲ. ಇಂಥ ಸಂದರ್ಭದಲ್ಲಿ ಮುಂಜಾಗೃತೆ ವಹಿಸಬೇಕಿತ್ತು’ ಎಂದೂ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.