
ರಾಯಬಾಗ ಪಟ್ಟಣದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಬಂದ್‌ಗೆ ಕರೆ ನೀಡಿದ್ದರಿಂದ ಪಟ್ಟಣದ ಪ್ರಮುಖ ಸ್ಥಳ ಬಿಕೋ ಎನ್ನುತ್ತಿತ್ತು
ರಾಯಬಾಗ: ಕಬ್ಬು ದರ ನಿಗದಿ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ರಾಯಬಾಗ ತಾಲ್ಲೂಕಿನ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ.
ರಾಯಬಾಗ ಪಟ್ಟಣ, ಹಾರೂಗೇರಿ, ನಿಡಗುಂದಿಯಲ್ಲಿ ರೈತರು, ವಿವಿಧ ದಲಿತಪರ ಹಾಗೂ ಕನ್ನಡಪರ ಸಂಘಟನೆಗಳ ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಎಲ್ಲ ವರ್ತಕರು ಬುಧವಾರ ತಮ್ಮ ಅಂಗಡಿ ಮುಗ್ಗಟ್ಟು, ಹೋಟೆಲ್, ಚಿತ್ರಮಂದಿರಗಳನ್ನೆಲ್ಲ ಬಂದ್ ಮಾಡಿ ಅನ್ನದಾತರಿಗೆ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬ್ಯಾರಿಸ್ಟರ್ ಪ್ರತಾಪರಾವ್ ಪಾಟೀಲ ಆಗಮಿಸಿ, ಪ್ರತಿ ಟನ್ ಕಬ್ಬಿಗೆ ₹3,500 ದರವನ್ನು ರಾಜ್ಯ ಸರ್ಕಾರ ನಿಗದಿ ಮಾಡಬೇಕು. ಜಿಲ್ಲೆಯಲ್ಲಿ 28 ಸಕ್ಕರೆ
ಕಾರ್ಖಾನೆಗಳಿದ್ದು, ಈವರೆಗೆ ರೈತರ ಬೇಡಿಕೆಯಂತೆ ದರ ಘೋಷಣೆ ಮಾಡಿಲ್ಲ. ಇದು ಇದೇ ರೀತಿ ಮುಂದುವರಿದರೆ ನಿಪ್ಪಾಣಿ ಹೆದ್ದಾರಿಯಲ್ಲಿ 5 ಲಕ್ಷ ರೈತರೊಂದಿಗೆ ತೆರಳಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ತಾಲ್ಲೂಕಿನ ಎಲ್ಲೆಡೆ ಮುಖ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿರುವ ರೈತರು, ವಿವಿಧ ಕನ್ನಡ ಪರ, ದಲಿತಪರ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರೆಲ್ಲ ಅರೆಬೆತ್ತಲಾಗಿ ಪ್ರತಿಭಟಿಸಿ ಕಾರ್ಖಾನೆಗಳ ಮಾಲೀಕರ ವಿರುದ್ಧ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ,ರಾಯಬಾಗ- ಚಿಕ್ಕೋಡಿ, ರಾಯಬಾಗ- ಹಾರೂಗೇರಿ, ರಾಯಬಾಗ- ಚಿಂಚಲಿ ರಸ್ತೆ ,ನಿಡಗುಂದಿ ರಾಯಬಾಗ ರಸ್ತೆಯ ಮಾರ್ಗಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ವಾಹನ ಸವಾರರು ಹಾಗೂ ಗ್ರಾಹಕರಿಗೆ ತೊಂದರೆಯಾಯಿತು.
ವಕೀಲರ ಸಂಘದ ಅಧ್ಯಕ್ಷ ಪಿ.ಎಂ.ದರೂರ, ಮುಖಂಡರಾದ ಶಿವರಾಜ್ ಪಾಟೀಲ, ಅಶೋಕ ಅಂಗಡಿ, ಅನಿಲ ಶೆಟ್ಟಿ, ಅನಿಲ ಕೊರವಿ, ರಾಕೇಶ ಅವಳೆ, ಇರ್ಫಾನ್ ತಾಂಬೋಳಿ, ಗಜು ಮಾಳಿ,ಮಹೇಶ ಕರಮಡಿ, ರಮೇಶ ಕುಂಬಾರ ಸೇರಿದಂತೆ ವಿವಿಧ ಗ್ರಾಮಗಳ ರೈತರು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ದಲಿತಪರ ಸಂಘಟನೆಗಳ ಕಾರ್ಯಕರ್ತರು ಇದ್ದರು.
ಬೆಲೆ ನಿಗದಿ: ಸಿ.ಎಂಗೆ ಶಾಸಕ ಪತ್ರ
ಚನ್ನಮ್ಮನ ಕಿತ್ತೂರು: ಕಿತ್ತೂರು ಸೇರಿದಂತೆ ರಾಜ್ಯ ಹಾಗೂ ಜಿಲ್ಲೆಯ ವಿವಿಧೆಡೆ ಕಬ್ಬು ಬೆಲೆ ನಿಗದಿಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ಸೂಕ್ತ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಬಾಬಾಸಾಹೇಬ ಪಾಟೀಲ ಪತ್ರ ಬರೆದಿದ್ದಾರೆ.
ರೈತರು ಬೆಲೆಗಾಗಿ ಆಗ್ರಹಿಸಿ ನಡೆಸುತ್ತಿರುವ ಹೋರಾಟವು ನ್ಯಾಯಯುತವಾಗಿದೆ. ಇದು ರಾಜ್ಯದಾದ್ಯಂತ ಹಬ್ಬಿ ಉಗ್ರ ಸ್ವರೂಪ ಪಡೆದುಕೊಳ್ಳುವ ಲಕ್ಷಣವಿದೆ. ತಕ್ಷಣ ರೈತರ ಕಬ್ಬಿಗೆ ವೈಜ್ಞಾನಿಕ ಬೆಲೆ ಘೋಷಣೆ ಮಾಡಬೇಕು ಎಂದು ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.