ADVERTISEMENT

ಮಳೆ ಹಾನಿಯ ಸಮೀಕ್ಷೆ ನಿಖರವಾಗಿರಲಿ: ಸಚಿವ ಗೋವಿಂದ ಕಾರಜೋಳ ತಾಕೀತು

ಪ್ರವಾಹ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ತಾಕೀತು

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 12:55 IST
Last Updated 18 ಜುಲೈ 2022, 12:55 IST
   

ಚಿಕ್ಕೋಡಿ (ಬೆಳಗಾವಿ): ‘ಮಳೆಯಿಂದಾಗಿ ಮನೆಗಳು ಹಾಗೂ ಬೆಳೆಗಳಿಗೆ ಆದ ಹಾನಿಯ ಸಮೀಕ್ಷೆಯನ್ನು ನಿಖರವಾಗಿ ಮಾಡಬೇಕು. ಯಾವುದೇ ಕಾರಣಕ್ಕೂ ಜನರಿಂದ ತಕರಾರು ಬರದಂತೆ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳು ತಾಕೀತು ಮಾಡಿದರು.

ಅತಿವೃಷ್ಟಿ ಹಾಗೂ ಪ್ರವಾಹ ಮುಂಜಾಗ್ರತೆ ಕುರಿತು ಚಿಕ್ಕೋಡಿಯಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಪ್ರಸಕ್ತ ಮಳೆಯಿಂದಾಗಿ ಈವರೆಗೆ 877 ಹೆಕ್ಟೇರ್ ಪ್ರದೇಶದ ಬೆಳೆ ಜಲಾವೃತವಾಗಿದೆ. ನೀರು ಕಡಿಮೆಯಾದ ತಕ್ಷಣ ಹಾನಿಯ ಸಮೀಕ್ಷೆ ನಡೆಸಬೇಕು. ಒಟ್ಟಾರೆ 775 ಮನೆಗಳು ಕುಸಿದಿದ್ದು, ಮಾರ್ಗಸೂಚಿ ಪ್ರಕಾರ ತಕ್ಷಣವೇ ಪರಿಹಾರ ನೀಡಬೇಕು’ ಎಂದರು.

ಬೆಳೆಹಾನಿ ಕುರಿತು ಮೊದಲು ಡ್ರೋನ್‌ ಮೂಲಕ ಸಮೀಕ್ಷೆ ನಡೆಸಬೇಕು. ನೀರು ಸರಿದ ಬಳಿಕ ಕ್ಷೇತ್ರ ಭೇಟಿ ನೀಡಿ ನಿಯಮಾವಳಿ ಪ್ರಕಾರ ಹಾನಿ ವರದಿ ನೀಡಬೇಕು ಎಂದು ಅವರು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ರಸ್ತೆಗಳು ಹಾಳಾಗಿದ್ದರೆ ಉದ್ಯೋಗ ಖಾತ್ರಿ ಯೋಜನೆ ಅಡಿ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಲೆದ ಮೂರು ವರ್ಷಗಳಲ್ಲಿ ಪ್ರವಾಹದಿಂದ 75,023 ಮನೆಗಳಿಗೆ ಹಾನಿಯಾಗಿದೆ. ಒಟ್ಟು ₹ 924 ಕೋಟಿ ಪರಿಹಾರ ನೀಡಲಾಗಿದೆ. ಯಾರಿಗಾದರೂ ಪರಿಹಾರ ಸಿಕ್ಕಿಲ್ಲ ಎಂದಾದರೆ ಮತ್ತೆ ಪರಿಶೀಲನೆ ನಡೆಸಿ, ನೀಡಲಾಗುವುದು ಎಂದು ತಿಳಿಸಿದರು.

ಪ್ರಸಕ್ತ ವರ್ಷ ಕೂಡ ಜಿಲ್ಲಾಧಿಕಾರಿ ಖಾತೆಯಲ್ಲಿ ₹ 28 ಕೋಟಿ ಹಾಗೂ ಎಲ್ಲ ತಹಶೀಲ್ದಾರರ ಖಾತೆಯಲ್ಲಿ ₹ 30 ಕೋಟಿ ಸೇರಿದಂತೆ ₹ 58 ಕೋಟಿ ಲಭ್ಯವಿದೆ. ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಲು ಯಾವುದೇ ತೊಂದರೆ ಇಲ್ಲ ಎಂದರು.

ಪ್ರವಾಹ: ಮುನ್ನೆಚ್ಚರಿಕೆ ಇರಲಿ:

ಮಹಾರಾಷ್ಟ್ರದಲ್ಲಿ ಈವರೆಗೆ ಎಲ್ಲ ಜಲಾಶಯಗಳು ಶೇ 60ರಷ್ಟು ಮಾತ್ರ ಭರ್ತಿಯಾಗಿವೆ. ಆದರೂ ಸಂಭವನೀಯ ಪ್ರವಾಹ ಹಿನ್ನೆಲೆಯಲ್ಲಿ ರಚಿಸಲಾದ ತಂಡಗಳು ಹಾಗೂ ನೋಡಲ್ ಅಧಿಕಾರಿಗಳು ಜವಾಬ್ದಾರಿ ನಿರ್ವಹಿಸಬೇಕು. ಯಾವುದೇ ಅಧಿಕಾರಿಗಳಿಗೂ ರಜೆ ನೀಡಬಾರದು ಎಂದು ಸಚಿವ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ, ‘ಕೆಳಹಂತದ ಐದು ಸೇತುವೆಗಳನ್ನು ಹೊಸದಾಗಿ ನಿರ್ಮಿಸುವ ಪ್ರಸ್ತಾವ ಐದು ವರ್ಷಗಳ ಹಿಂದೆಯೇ ಸಿದ್ಧಪಡಿಸಲಾಗಿದೆ. ಆ ಸೇತುವೆಗಳನ್ನು ನಿರ್ಮಿಸಿದರೆ ಪ್ರತಿವರ್ಷ ಸೇತುವೆ ಮುಳುಗಡೆ ಸಮಸ್ಯೆ ಉದ್ಭವಿಸುವುದಿಲ್ಲ’ ಎಂದು ಸಲಹೆ ನೀಡಿದರು.

ಚಿಕ್ಕೋಡಿ ಉಪ ವಿಭಾಗದಲ್ಲಿ ಕೃಷ್ಣಾ ನದಿಯಿಂದ 88 ಗ್ರಾಮಗಳು ಪ್ರವಾಹ ಬಾಧೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ ಸಭೆಗೆ ತಿಳಿಸಿದರು.

ಜಿಲ್ಲೆಯಲ್ಲಿ ಮಳೆಯಿಂದಾಗಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ಮೂರು ಮನೆಗಳು ಸಂಪೂರ್ಣ ನಾಶವಾಗಿವೆ. 745 ಮನೆಗಳಿಗೆ ಭಾಶಃ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ವಿವರಿಸಿದರು.

ಶಾಸಕ‌ ಗಣೇಶ ಹುಕ್ಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಡಾ.ಸಂಜೀವ ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.