ಖಾನಾಪುರ: ತಾಲ್ಲೂಕಿನ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಮಳೆರಾಯನ ಅಬ್ಬರ ಮುಂದುವರೆದಿದೆ. ಗುರುವಾರ ಇಡೀ ರಾತ್ರಿ ಮತ್ತು ಶುಕ್ರವಾರ ಇಡೀ ದಿನ ಪಟ್ಟಣ ಸೇರಿದಂತೆ ತಾಲ್ಲೂಕಿನ ಲೋಂಡಾ, ಕಣಕುಂಬಿ, ಹೆಮ್ಮಡಗಾ, ಜಾಂಬೋಟಿ, ಶಿರೋಲಿ, ಗುಂಜಿ ಅರಣ್ಯದಲ್ಲಿ ಧಾರಾಕಾರ ಮಳೆ ಸುರಿದಿದೆ. ಗುರುವಾರ ಮುಳುಗಿದ್ದ ಸೇತುವೆಗಳು ಶುಕ್ರವಾರವೂ ಸಂಚಾರಕ್ಕೆ ತೆರೆದುಕೊಳ್ಳಲಿಲ್ಲ. ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಇಟಗಿ, ಗಂದಿಗವಾಡ, ಬೀಡಿ, ಪಾರಿಶ್ವಾಡ, ದೇವಲತ್ತಿ ಸುತ್ತಮುತ್ತ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದ್ದು, ತಾಲ್ಲೂಕಿನಾದ್ಯಂತ ಮೋಡ ಮುಸುಕಿದ ಶೀತ ವಾತಾವರಣ ಮುಂದುವರೆದಿದೆ.
ಅರಣ್ಯಪ್ರದೇಶದಲ್ಲಿ ಸತತಧಾರೆಯ ಪರಿಣಾಮ ಕಾನನವಾಸಿಗಳ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾನನದಂಚಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆಗಳ ಮೇಲೆ ನೀರಿನ ಹರಿವು ಶುಕ್ರವಾರವೂ ಮುಂದುವರೆದಿದೆ.
ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಮತ್ತು ನದಿಗಳನ್ನು ಸಂಗಮಿಸುವ ಹಳ್ಳಕೊಳ್ಳಗಳಲ್ಲಿ ಪ್ರವಾಹ ಪರಿಸ್ಥಿತಿ ಯಥಾಸ್ಥಿತಿ ಮುಂದುವರೆದಿದೆ. 30ಕ್ಕೂ ಹೆಚ್ಚು ಸೇತುವೆಗಳ ಮೇಲೆ ಹಲವು ಅಡಿಗಳಷ್ಟು ನೀರು ಹರಿಯುತ್ತಿದ್ದು, ಈ ಸೇತುವೆಗಳ ಮೂಲಕ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಎಲ್ಲಿ ಎಷ್ಟು ಮಳೆ: ಶುಕ್ರವಾರ ಕಣಕುಂಬಿ ಸುತ್ತಮುತ್ತ 14.8 ಸೆಂ.ಮೀ, ಜಾಂಬೋಟಿ 8.4 ಸೆಂ.ಮೀ, ಖಾನಾಪುರ ಪಟ್ಟಣ 4.1 ಸೆಂ.ಮೀ, ಅಸೋಗಾ 5 ಸೆಂ.ಮೀ, ಗುಂಜಿ 7.6 ಸೆಂ.ಮೀ, ಲೋಂಡಾ 10 ಸೆಂ.ಮೀ, ನಾಗರಗಾಳಿ 6.5 ಸೆಂ.ಮೀ, ಬೀಡಿ ಮತ್ತು ಕಕ್ಕೇರಿ ಭಾಗದಲ್ಲಿ 4 ಸೆಂ.ಮೀ ಪ್ರಮಾಣದಲ್ಲಿ ಮಳೆಯಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಲಪ್ರಭಾ ನದಿತೀರದ ಕೃಷಿ ಜಮೀನುಗಳಲ್ಲಿ ನದಿಯ ನೀರು ನುಗ್ಗಿ ಗದ್ದೆಗಳು ಜಲಾವೃತಗೊಂಡಿವೆ. ಲೋಂಡಾ ಅರಣ್ಯ ವ್ಯಾಪ್ತಿಯ ಸಾತನಾಳಿ ಮತ್ತು ಮಾಚಾಳಿ ಗ್ರಾಮಗಳ ಬಳಿಯ ಸೇತುವೆ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದೆ. ಇದುವರೆಗಿನ ಮಳೆಯಿಂದ ತಾಲ್ಲೂಕಿನಲ್ಲಿ ಯಾವುದೇ ಅನಾಹುತ ಆಗಿಲ್ಲ ಎಂದು ತಹಶೀಲ್ದಾರ್ ಪ್ರಕಾಶ ಗಾಯಕವಾಡ ತಿಳಿಸಿದ್ದಾರೆ.
‘ಜನರು ನೀರನ್ನು ಕುದಿಸಿ ಆರಿಸಿ ಸೇವಿಸಬೇಕು. ಮಗಲುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಮನೆಯ ಸುತ್ತಮುತ್ತ ನೀರು ಶೇಖರಣೆ ಆಗದಂತೆ ಗಮನಹರಿಸಬೇಕು’ ಎಂದು ತಾಲ್ಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾರಾಯಣ ವಡ್ಡೀನ ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.