ADVERTISEMENT

ಚಿಕ್ಕೋಡಿ | ಭಾರಿ ಮಳೆ: ಯಡೂರ ವೀರಭದ್ರೇಶ್ವರ ದೇವಸ್ಥಾನ ಜಲಾವೃತ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 13:44 IST
Last Updated 28 ಜುಲೈ 2024, 13:44 IST
ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ತೀರದಲ್ಲಿರುವ ಸುಕ್ಷೇತ್ರ ಯಡೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಕೃಷ್ಣಾ ನದಿ ನೀರಿನಿಂದ ಜಲಾವೃತಗೊಂಡಿದೆ
ಚಿಕ್ಕೋಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿ ತೀರದಲ್ಲಿರುವ ಸುಕ್ಷೇತ್ರ ಯಡೂರು ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಕೃಷ್ಣಾ ನದಿ ನೀರಿನಿಂದ ಜಲಾವೃತಗೊಂಡಿದೆ   

ಚಿಕ್ಕೋಡಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಕಳೆದ 15 ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಬೀಳುತ್ತಿರುವ ಪರಿಣಾಮವಾಗಿ ಕೃಷ್ಣಾ ನದಿಗೆ 2 ಲಕ್ಷ 75 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಹೀಗಾಗಿ ಕೃಷ್ಣಾ ನದಿ ತೀರದಲ್ಲಿರುವ ಚಿಕ್ಕೋಡಿ ತಾಲ್ಲೂಕಿನ ಯಡೂರು ಗ್ರಾಮದ ಪೌರಾಣಿಕ ಹಿನ್ನೆಲೆಯ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿ ಸಂಪೂರ್ಣ ಜಲಾವೃತಗೊಂಡಿದೆ.

ಶನಿವಾರ ತಡರಾತ್ರಿ ದೇವಸ್ಥಾನದ ದಕ್ಷಿಣ ದ್ವಾರದಿಂದ ಕೃಷ್ಣಾ ನದಿ ನೀರು ಗರ್ಭಗುಡಿಯೊಳಗೆ ಪ್ರವೇಶಿಸಿತು. ನದಿ ನೀರು ಗರ್ಭಗುಡಿಯೊಳಗೆ ಪ್ರವೇಶಸುತ್ತಿದ್ದಂತೆಯೇ ವೀರಭದ್ರದೇವರಿಗೆ ಕೃಷ್ಣೆಯ ಜಲಾಭಿಷೇಕವಾಯಿತೆಂದು ಅರ್ಚಕರು ಪೂಜೆ, ಆರತಿ ನೆರವೇರಿಸಿದರು. ಸಕಲ ವಾದ್ಯ ವೈಭವಗಳೊಂದಿಗೆ ಭಕ್ತಿ ಭಾವದಿಂದ ವೀರಭದ್ರೇಶ್ವರ ಹಾಗೂ ಭದ್ರಕಾಳೇಶ್ವರಿ ದೇವರ ಮೂರ್ತಿಗಳನ್ನು ಕಾಡಸಿದ್ದೇಶ್ವರ ಮಠಕ್ಕೆ ತಂದು ಪ್ರತಿಷ್ಠಾಪಿಸಲಾಯಿತು.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಆರಾಧ್ಯ ದೈವ ಆಗಿರುವ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿಗೆ ನೀರು ಪ್ರವೇಶಿಸುತ್ತಿದ್ದಂತೆ ದರ್ಶನ ಸಂಪೂರ್ಣ ಬಂದಾಗಿದೆ. ಇದರಿಂದ ಭಕ್ತರಿಗೆ ಸಹಜವಾಗಿಯೇ ನಿರಾಶೆ ಉಂಟಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.