ರಾಮದುರ್ಗ: ಕೇಂದ್ರದ ಮೋದಿ ಸರ್ಕಾರ ಬೆಳಗಾವಿ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂಬುದನ್ನು ಚಿಂತಿಸಿ ಮತದಾನಕ್ಕೆ ಮುಂದಾಗಬೇಕು. ಬಿಜೆಪಿಗರು ಹೇಳುವ ಸುಳ್ಳು ನಂಬಿ ಮೋಸ ಹೋಗಬಾರದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಮದುರ್ಗದ ರಾಠಿ ಫಾರ್ಮ್ ಹೌಸ್‌ನಲ್ಲಿ ನಡೆದ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಪರ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಮದುರ್ಗದಲ್ಲಿ ಬಿಜೆಪಿಯ ಹಳೆಯ ನಾಯಕರು, ಹೊಸ ನಾಯಕರು ಯಾರೂ ಇಲ್ಲ. ಇಲ್ಲಿನ ಮೈದಾನ ಖಾಲಿ ಇದೆ. ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕುದುರೆಗಳನ್ನು ಓಡಿಸಿ ಕಾಂಗ್ರೆಸ್ಸಿಗೆ ಹೆಚ್ಚಿನ ಮತ ಹಾಕಿ ಗೆಲ್ಲಿಸಬೇಕು ಎಂದರು.
ಮಹಿಳೆಯರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿಗಳನ್ನು ನಿರಂತರವಾಗಿ ನಡೆಸಲು ಈಗಾಗಲೇ 3 ಸಾವಿರ ಬಸ್‌ಗಳನ್ನು ಸರ್ಕಾರ ಖರೀದಿಸಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ ಮಾತನಾಡಿದರು. ಶಾಸಕ ಅಶೋಕ ಪಟ್ಟಣ ಅಧ್ಯಕ್ಷತೆ ವಹಿಸಿದ್ದರು.
‘ಶೆಟ್ಟರ್ ಹೀನಾಯವಾಗಿ ಸೋಲಿಸಿ’ ಹೊರಗಿನವರಿಗೆ ಒಳಗಿನವರ ಕಷ್ಟ ಗೊತ್ತಾಗುವುದಿಲ್ಲ. ಮುಖ್ಯಮಂತ್ರಿ ಇದ್ದಾಗ ಜಗದೀಶ ಶೆಟ್ಟರ್ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಏನು? ಅಧಿಕಾರದ ಲಾಭಕ್ಕಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ನೆಗೆಯುವ ಜಗದೀಶ ಶೆಟ್ಟರ್ ಅವರನ್ನು ಹೀನಾಯವಾಗಿ ಸೋಲಿಸಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ ಕರೆ ನೀಡಿದರು. ಬಿಜೆಪಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಸೇರ್ಪಡೆಯಾದ ಜಗದೀಶ ಶೆಟ್ಟರ್ ಅವರು ಬಿಜೆಪಿಯ ಕೋಮುವಾದಿ ಧೋರಣೆಯನ್ನು ಖಂಡಿಸಿದ್ದರು. ಈಗ ಮತ್ತೆ ಬಿಜೆಪಿಗೆ ಸೇರಿ ಅಭ್ಯರ್ಥಿಯಾಗಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಕಳೆದ ವಿಧಾನ ಸಭೆಯ ಚುನಾವಣೆ ವೇಳೆಗೆ ಪ್ರನಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಸರ್ಕಾರ ಬಂದ ಮೇಲೆ ಅವುಗಳನ್ನು ಈಡೇರಿಸಿದ್ದೇವೆ. ಕೆಲವರು ಲೋಕಸಭೆಯ ಚುನಾವಣೆ ಮುಗಿದ ಮೇಲೆ ಯೋಜನೆ ನಿಂತು ಹೋಗುತ್ತದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ಮುಂದಿನ ನಾಲ್ಕು ವರ್ಷಗಳ ತನಕವೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.