ADVERTISEMENT

ರಾಮದುರ್ಗ | ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ: ಏರುತ್ತಿದೆ ಕಾವು

ಚನ್ನಪ್ಪ ಮಾದರ
Published 12 ಸೆಪ್ಟೆಂಬರ್ 2025, 2:15 IST
Last Updated 12 ಸೆಪ್ಟೆಂಬರ್ 2025, 2:15 IST
ರಾಮದುರ್ಗ ತಾಲ್ಲೂಕಿನ ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಭವನ
ರಾಮದುರ್ಗ ತಾಲ್ಲೂಕಿನ ಖಾನಪೇಟೆಯ ಶ್ರೀ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಭವನ   

ರಾಮದುರ್ಗ: ರಾಮದುರ್ಗ ತಾಲ್ಲೂಕಿನ ಖಾನಪೇಟೆಯಲ್ಲಿ ಸಹಕಾರ ತತ್ವದಡಿ ತಲೆ ಎತ್ತಿರುವ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಗೆ ಈ ತಿಂಗಳ 14 ರಂದು ಚುನಾವಣೆ ನಡೆಯುತ್ತಿದೆ. ಇದೇ ಪ್ರಥಮ ಬಾರಿಗೆ ಮೂರು ಪೆನೆಲ್‌ಗಳು ಸ್ಪರ್ಧಾ ಕಣದಲ್ಲಿರುವುದರಿಂದ ಚುನಾವಣಾ ಕಾವು ತಾರಕಕ್ಕೇರಿದೆ.

15 ವರ್ಷಗಳಿಂದಲೂ ಮಾಜಿ ಶಾಸಕ ಯಾದವಾಡ ಕುಟುಂಬದ ಹಿಡಿತದಲ್ಲಿದ್ದ ಕಾರ್ಖಾನೆಯ ಆಡಳಿತ ಮಂಡಳಿಯ ಅಧಿಕಾರವನ್ನು ಕಿತ್ತುಕೊಳ್ಳಬೇಕು ಎಂದು ಈ ಸಾರಿಯ ಚುನಾವಣೆಯಲ್ಲಿ ಯಾದವಾಡ ಕುಟುಂಬದ ವಿರುದ್ಧ ಸೆಡ್ಡು ಹೊಡೆಯಲು ಎರಡು ಪೆನೆಲ್‌ಗಳು ಅಸ್ತಿತ್ವಕ್ಕೆ ಬಂದಿವೆ.

ಅಧಿಕಾರದಲ್ಲಿರುವ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಕಾರ್ಖಾನೆಯ ಹಾಲಿ ಅಧ್ಯಕ್ಷ ಮಲ್ಲಣ್ಣ ಯಾದವಾಡ ಅವರನ್ನು ಮಣಿಸಲು ಕಾರ್ಖಾನೆಯ ಸಂಸ್ಥಾಪಕ ಅಧ್ಯಕ್ಷ ಬಿ.ಬಿ. ಹಿರೇರಡ್ಡಿ ಅವರ ಹೆಸರಿನಲ್ಲಿ ಪರ್ಯಾಯ ಪೆನೆಲ್‌ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಮತ ಬೇಟೆಗೆ ಮುಂದಾಗಿದೆ. ಇದಲ್ಲದೆ ರೈತ ಹೋರಾಟಗಾರರ ಪೆನೆಲ್‌ ಹೆಸರಿನಲ್ಲಿ ಕೆಲ ರೈತರೂ ಅಖಾಡಕ್ಕೆ ಧುಮುಕಿ ಯಾದವಾಡ ಕುಟುಂಬದ ನಿದ್ದೆ ಕೆಡಿಸಿದ್ದಾರೆ.

ADVERTISEMENT

ಕಳೆದ ಹಲವಾರು ವರ್ಷಗಳಿಂದಲೂ ಕಾರ್ಖಾನೆಗೆ ಚುನಾವಣೆ ನಡೆಸದೇ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸಲಾಗುತ್ತಿತ್ತು. ಇದಕ್ಕೆಲ್ಲ ತಾಲ್ಲೂಕಿನ ಮಠಾಧೀಶರು, ತಾಲ್ಲೂಕಿನ ಹಿರಿಯರು, ಪತ್ರಕರ್ತರು ಪ್ರಯತ್ನ ನಡೆಸಿದ್ದರು. ಆದರೆ, ಮೂರು ಅವಧಿಯಲ್ಲಿ ಚುನಾವಣೆ ನಡೆದು ಯಾದವಾಡ ಕುಟುಂಬದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮತ್ತು ಮಲ್ಲಣ್ಣ ಯಾದವಾಡ ಗೆದ್ದು ಆಡಳಿತ ನಡೆಸುತ್ತ ಬಂದಿದ್ದರು.

ಕಾರ್ಖಾನೆಯ ಷೇರುದಾರರನ್ನು ಹಿಡಿತದಲ್ಲಿ ಇಟ್ಟುಕೊಂಡಿರುವ ಯಾದವಾಡ ಕುಟುಂಬದವರು ತಾಲ್ಲೂಕಿನಲ್ಲಿ ಮತದಾರರನ್ನು ಒಲೈಸಲು ಮೂರು ಸುತ್ತು ಸುತ್ತಾಡಿ ಯತ್ನಿಸುತ್ತಿದ್ದಾರೆ. ಉಳಿದೆರಡು ಪೆನೆಲ್‌ನ ಉಮೇದುವಾರರು ರಾಮದುರ್ಗ ತಾಲ್ಲೂಕು ಸೇರಿದಂತೆ ವಿವಿಧ ಕಡೆಗಳಲ್ಲಿ ಸುತ್ತಾಡಿ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

15 ವರ್ಷಗಳಿಂದಲೂ ಕಾರ್ಖಾನೆಯಿಂದ ರಿಯಾಯಿತಿ ದರದಲ್ಲಿ ಷೇರುದಾರರಿಗೆ ಒಂದು ಕ್ವಿಂಟಾಲ್‌ ಸಕ್ಕರೆ ವಿತರಣೆ ಮಾಡಲಾಗುತ್ತಿದೆ. ಕಾರ್ಖಾನೆಯನ್ನು ಸಾಲಮುಕ್ತ ಮಾಡಲಾಗಿದೆ. ಇದನ್ನು ಗಂಭೀರವಾಗಿ ಗಮನಿಸಿರುವ ಮತದಾರರು ತಮ್ಮ ಗೆಲುವಿಗೆ ಆಶೀರ್ವದಿಸಲಿದ್ದಾರೆ

-ಮಲ್ಲಣ್ಣ ಯಾದವಾಡ ನಿಕಟಪುರ್ವ ಅಧ್ಯಕ್ಷರು

ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಮಾಜಿ ಶಾಸಕ ಬಿ.ಬಿ. ಹಿರೇರಡ್ಡಿ ಅವರು ಕಾರ್ಖಾನೆ ಸ್ಥಾಪನೆಗೆ ತಮ್ಮ ಜೀವ ತೇಯ್ದರು. ಈಗ ಅಧಿಕಾರದಲ್ಲಿರುವವರು ಸ್ವಂತ ಕಾರ್ಖಾನೆ ಎಂಬಂತೆ ಷೇರುದಾರರನ್ನು ಕಡೆಗಣಿಸಿದ್ದಾರೆ. ಅದಕ್ಕಾಗಿ ಮತದಾರ ತಮಗೆ ಬೆಂಬಲಿಸಲಿದ್ದಾರೆ. ಷೇರುದಾರರ ಅಸ್ತಿತ್ವ ಉಳಿಸಿಕೊಳ್ಳಲು ಈ ಚುನಾವಣೆ ಬಳಸಿಕೊಳ್ಳಲಾಗುತ್ತಿದೆ

-ಬಸವರಾಜ ಹಿರೇರಡ್ಡಿ ಹಿರೇರಡ್ಡಿ ಪೆನೆಲ್‌ನ ಮುಖ್ಯಸ್ಥ

ಕಳೆದ ಚುನಾವಣೆಯಲ್ಲಿ ಕಾರ್ಖಾನೆಯ ಷೇರುದಾರರ ಮತದಾನದ ಹಕ್ಕು ಮೊಟಕುಗೊಳಿಸಿದ್ದನ್ನು ಹೋರಾಟದ ಮೂಲಕ ಎಲ್ಲರಿಗೂ ಮತದಾನದ ಹಕ್ಕು ದೊರಕಿಸಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರು ತಮ್ಮ ಪರವಾಗಿದ್ದಾರೆ

-ಎಸ್‌.ಆರ್‌. ಪಾಟೀಲ ರೈತ ಹೋರಾಟಗಾರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.