ರಾಮದುರ್ಗ: ತಾಲ್ಲೂಕಿನ ಮುಳ್ಳೂರು ಬೆಟ್ಟದಲ್ಲಿ ನಿರ್ಮಿಸಿದ 78 ಅಡಿ ಎತ್ತರದ ಶಿವನ ಮೂರ್ತಿಗೆ, 22 ಅಡಿ ಎತ್ತರದ ನಂದಿ ವಿಗ್ರಹಕ್ಕೆ ಮಹಾಶಿವರಾತ್ರಿ ಪ್ರಯುಕ್ತ ಲಕ್ಷಾಂತರ ಭಕ್ತರು ಬುಧವಾರ ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಭಕ್ತರು, ವಿವಿಧ ಧಾರ್ಮಿಕ ವಿಧಿವಿಧಾನ ಕೈಗೊಂಡರು. ಬೆಳಿಗ್ಗೆಯಿಂದಲೇ ಸುಡು ಬಿಸಿಲನ್ನೂ ಲೆಕ್ಕಿಸದೆ ಸರದಿ ಸಾಲಿನಲ್ಲಿ ನಿಂತು ಶಿವನ ದರ್ಶನ ಪಡೆದರು. ಭಕ್ತರ ಜೈಕಾರ ಮತ್ತು ಶಿವನಾಮ ಜಪದ ಮಧ್ಯೆ ‘ಕೋಟೆಗಳ ನಾಡು’ ಸಂಭ್ರಮಿಸಿತು. ಜಾತಿ ಭೇದ ಮರೆತು ಸರ್ವಧರ್ಮೀಯರೂ ಹಬ್ಬದ ಆಚರಣೆಯಲ್ಲಿ ಭಾಗಿಯಾಗಿದ್ದು ಭಾವೈಕ್ಯತೆಗೆ ಸಾಕ್ಷಿಯಾಯಿತು.
ಮಹಾಶಿವರಾತ್ರಿ ಆಚರಣೆಗೆ ಆಗಮಿಸಿದ್ದ ಭಕ್ತರಿಗೆ ಶಿವ ಪ್ರತಿಷ್ಠಾನ ಸೇವಾ ಸಮಿತಿಯು ಕುಡಿಯುವ ನೀರು, ಫಲಾಹಾರದ ವ್ಯವಸ್ಥೆ ಮಾಡಿತ್ತು. ಸುಮಾರು 3 ಟನ್ ಖರ್ಜೂರ, 3 ಕ್ವಿಂಟಲ್ ಬೇಯಿಸಿದ ಶೇಂಗಾ, ಒಂದು ಲಕ್ಷಕ್ಕೂ ಅಧಿಕ ಬಾಳೆ ಹಣ್ಣುಗಳನ್ನು ವಿತರಿಸಿತು.
ರಾಮೇಶ್ವರ ದೇವಸ್ಥಾನದ ಧ್ಯಾನ ಮಂದಿರದ ಶಿವಲಿಂಗಕ್ಕೆ ಬೆಳಿಗ್ಗೆ ರುದ್ರಾಭಿಷೇಕ, ಬಿಲ್ವಾರ್ಚಣೆ ಮಾಡಲಾಯಿತು. ಇದರೊಂದಿಗೆ ಶಿವನ ಮೂರ್ತಿಗೆ ವಿಶೇಷ ಪೂಜೆ ನೆರವೇರಿತು. ನಂದಿ ವಿಗ್ರಹಕ್ಕೆ ಪುಷ್ಪಾಲಂಕಾರ ಮಾಡಿ ಪೂಜಿಸಲಾಯಿತು.
Quote - 8 ವರ್ಷಗಳಿಂದ ಇಲ್ಲಿಗೆ ಬಂದು ಮಹಾಶಿವರಾತ್ರಿ ಆಚರಿಸುತ್ತಿದ್ದೇವೆ. ಇದೊಂದು ಪ್ರವಾಸಿ ತಾಣವಾಗಿರುವುದು ಖುಷಿ ತಂದಿದೆ ಸಾಕ್ಷಿ ಬುಡ್ಡಾಗೋಳ ಶಿವಭಕ್ತೆ ರಾಮದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.