ADVERTISEMENT

ಯಾರ ಸಂಪರ್ಕಕ್ಕೂ ಸಿಗದ ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2018, 15:56 IST
Last Updated 30 ಡಿಸೆಂಬರ್ 2018, 15:56 IST
   

ಬೆಳಗಾವಿ: ಶಾಸಕ ರಮೇಶ ಜಾರಕಿಹೊಳಿ ಕಳೆದ ಐದು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಎಲ್ಲಿದ್ದಾರೆ ಎನ್ನುವ ಖಚಿತ ಮಾಹಿತಿ ಯಾರ ಬಳಿಯೂ ಇಲ್ಲ. ಕೆಲವರು ಗೋಕಾಕದಲ್ಲಿಯೇ ಇದ್ದಾರೆ ಎನ್ನುತ್ತಿದ್ದರೆ, ಇನ್ನು ಕೆಲವರು ದೆಹಲಿಗೆ ಹೋಗಿದ್ದಾರೆ ಎನ್ನುತ್ತಿದ್ದಾರೆ.

ಜಿಲ್ಲೆಯ ಯಾವುದೇ ಕಾಂಗ್ರೆಸ್‌ ಮುಖಂಡರ ಜೊತೆ ಸಂಪರ್ಕದಲ್ಲಿಲ್ಲ. ಯಾವುದೇ ದೂರವಾಣಿ ಕರೆಗಳನ್ನು ಸ್ವೀಕರಿಸುತ್ತಿಲ್ಲ. ತಮ್ಮ ಸಂಪರ್ಕಕ್ಕೂ ಸಿಕ್ಕಿಲ್ಲವೆಂದು ಸಹೋದರ, ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ರಮೇಶ ಅವರ ‘ಕಣ್ಮರೆ’ ಕುತೂಹಲ ಸೃಷ್ಟಿಸಿದೆ.

‘ರಮೇಶ ಜೊತೆ ಅವರ ಹಿರಿಯ ಪುತ್ರ ಅಮರನಾಥ ಹಾಗೂ ಕುಟುಂಬದ ಸದಸ್ಯರು ಇದ್ದಾರೆ. ಯಾವುದೇ ರಾಜಕೀಯ ಮುಖಂಡರು ಜೊತೆಯಲ್ಲಿ ಇಲ್ಲ. ರಮೇಶ ಅವರು ಹಠವಾದಿಯಾಗಿದ್ದಾರೆ. ತಾವು ಅಂದುಕೊಂಡಿದ್ದನ್ನು ಮಾಡಿ ತೋರಿಸುತ್ತಾರೆ. ತಾವು ಏನು ಮಾಡುತ್ತಾರೆ ಎನ್ನುವುದರ ಸುಳಿವನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಈ ಸಲ ಅತ್ಯಂತ ರಹಸ್ಯವಾಗಿ ಕಾರ್ಯಾಚರಣೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಚಿವ ಸಂಪುಟದಿಂದ ಕೈಬಿಟ್ಟಿರುವುದರಿಂದ ಅಸಮಾಧಾನಗೊಂಡಿರುವ ರಮೇಶ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ನಾಲ್ಕು ದಿನಗಳಲ್ಲಿ ಎಲ್ಲವನ್ನೂ ಬಹಿರಂಗವಾಗಿ ತಿಳಿಸುವೆ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಹೇಳಿದ್ದರು. ಆ ನಂತರ ಗೋಕಾಕಗೆ ಬಂದ ಅವರು, ಮಂಗಳವಾರದಿಂದ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಫೋನ್‌ ಸ್ವಿಚ್‌ ಆಫ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.