ADVERTISEMENT

ಪ್ರಕಾಶ ಹುಕ್ಕೇರಿ ಬಿಜೆಪಿ ಸೇರ್ಪಡೆ ಬಗ್ಗೆ ಚರ್ಚೆಯಾಗಿಲ್ಲ: ರಮೇಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 13:57 IST
Last Updated 27 ಅಕ್ಟೋಬರ್ 2020, 13:57 IST
ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ‘ಕಾಂಗ್ರೆಸ್ ಮುಖಂಡ ಪ್ರಕಾಶ ಹುಕ್ಕೇರಿ ನನ್ನ ಹಳೆಯ ಸ್ನೇಹಿತ. ಆದರೆ, ಅವರು ಬಿಜೆಪಿ ಸೇರುವ ವಿಚಾರದಲ್ಲಿ ಮಾತುಕತೆ ಆಗಿಲ್ಲ. ಈ ವಿಷಯದಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ಇಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸುರೇಶ ಅಂಗಡಿ ಕುಟುಂಬಕ್ಕೆ ಟಿಕೆಟ್ ನೀಡಿದ್ರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ ಎಂದು ಪ್ರಕಾಶ ನೀಡಿರುವ ಹೇಳಿಕೆ ಗಮನಿಸಿದ್ದೇನೆ. ಆದರೆ, ಆ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧರಿದ್ದೇವೆ’ ಎಂದು ತಿಳಿಸಿದರು.

‘ಅವರನ್ನು ಸೇರಿಸಿಕೊಳ್ಳುವುದು, ಬಿಡುವುದು ಪಕ್ಷಕ್ಕೆ ಸೇರಿದ್ದು. ಪ್ರಕಾಶ ಮುಂದೆ ಏನು ನಿರ್ಧಾರ ಮಾಡುತ್ತಾರೋ ನೋಡೋಣ’ ಎಂದರು.

ADVERTISEMENT

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರನ್ನು ಗೆಲ್ಲಿಸಿ ತರುತ್ತೇವೆ. 5–6ಲಕ್ಷ ಮತಗಳ ಅಂತರದಿಂದ ಗೆಲ್ಲಿಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಕಾರ್ಯಕರ್ತರ ದಂಡು ಸಿದ್ಧವಾಗಿದೆ. ಚುನಾವಣೆ ಘೋಷಣೆ ಬಳಿಕ ಚಟುವಟಿಕೆ ಚುರುಕುಗೊಳಿಸಲಿದ್ದೇವೆ. ಸುರೇಶ ಅಂಗಡಿ ಮಾಡಿದ್ದ ಕೆಲಸ ಮುಂದುವರಿಸುವ ಅಭ್ಯರ್ಥಿಗೆ ಹೈಕಮಾಂಡ್‌ ಟಿಕೆಟ್‌ ಕೊಟ್ಟರೆ ಒಳ್ಳೆಯದು’ ಎಂದು ಪ್ರತಿಕ್ರಿಯಿಸಿದರು.

‘ಐವರು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ’ ಎಂಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಸವದಿ ಬಳಿಯೇ ಹೆಚ್ಚಿನ ಮಾಹಿತಿ ಪಡೆಯಿರಿ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.